ನೇಮಕಾತಿ ನಿಯಮ ಮರು ಪರಿಶೀಲನೆಗೆ ಆಗ್ರಹ

25bdvt3
ಭದ್ರಾವತಿ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು ಬಿಇಒ ಎ.ಕೆ.ನಾಗೇಂದ್ರಪ್ಪ ಅವರಿಗೆ ಮನವಿ ಸಲ್ಲಿಸಿದರು. ಟಿ.ಪೃಥ್ವಿರಾಜ್, ವೈ.ಎನ್.ಶ್ರೀಧರ್‌ಗೌಡ, ಎಸ್.ಕೆ.ಮೋಹನ್, ಸೌಭಾಗ್ಯಾ, ಶ್ರೀಧರ್ ಇತರರಿದ್ದರು.
Published on

ಭದ್ರಾವತಿ: ಪ್ರಾಥಮಿಕ ಶಾಲಾ ಶಿಕ್ಷಕರ ವೃಂದ ಹಾಗೂ ನೇಮಕಾತಿ ನಿಯಮಗಳನ್ನು ಮರು ಪರಿಶೀಲಿಸಿ ತಿದ್ದುಪಡಿ ಮಾಡುವ ಮೂಲಕ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಪದವೀಧರ ಪ್ರಾಥಮಿಕ ಶಿಕ್ಷಕರ ಹುದ್ದೆಗಳಿಗೆ ಸೇವಾ ಜೇಷ್ಠೃತೆಯೊಂದಿಗೆ ವಿಲೀನಗೊಳಿಸಬೇಕೆಂದು ಆಗ್ರಹಿಸಿ ಗುರುವಾರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಬಿಇಒ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದ ಪದಾಧಿಕಾರಿಗಳು, ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ 1ರಿಂದ 7ನೇ ತರಗತಿಗೆ ನೇಮಕಗೊಂಡ ಗುಮಾಸ್ತರು, ಡಿ ದರ್ಜೆ ನೌಕರರು, ಗಣಕಯಂತ್ರ ಶಿಕ್ಷಕರು, ಮುಖ್ಯಶಿಕ್ಷಕರು ಮತ್ತು ದೈಹಿಕ ಶಿಕ್ಷಣ ಶಿಕ್ಷಕರು ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಇವರು ಸಾಕಷ್ಟು ಅನುಭವ ಹೊಂದಿದ್ದರೂ 2017ರ ವೃಂದ ಹಾಗೂ ನೇಮಕಾತಿ ನಿಯಮ, ತಿದ್ದುಪಡಿ ನಿಯಮ 2021ರಂತೆ 2016ಕ್ಕಿಂತ ಮೊದಲು ನೇಮಕಾತಿ ಹೊಂದಿದ್ದ ಎಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಪಿಎಸ್‌ಟಿ ಸೀಮಿತ ಎಂದು ಪದನಾಮೀಕರಿಸಲಾಗಿದೆ. ಅಲ್ಲದೆ 6ರಿಂದ 8ನೇ ತರಗತಿಗಳ ಬೋಧನೆಗೆ ಜಿಪಿಟಿ ಎಂಬ ಹೊಸ ವೃಂದವನ್ನು ಸೃಷ್ಟಿಸಿ ಶಿಕ್ಷಕರ ನೇಮಕಾತಿ ಮಾಡಿಕೊಳ್ಳುತ್ತಿರುವುದು ಸರಿಯಾದ ಕ್ರಮವಲ್ಲ ಎಂದು ದೂರಿದರು.
2017ರ ವೃಂದ ಮತ್ತು ನೇಮಕಾತಿ ನಿಯಮಗಳು, 2021ರಲ್ಲಿ ಆಗಿರುವ ತಿದ್ದುಪಡಿಗಳನ್ನು ಮತ್ತೊಮ್ಮೆ ಪರಿಶೀಲಿಸಿ ಮರು ರಚಿಸುವ ಮೂಲಕ ಸಾಮಾಜಿಕ ತಾರತಮ್ಯ ಸರಿಪಡಿಸಬೇಕು. ಪಿಎಸ್‌ಟಿ ಶಿಕ್ಷಕರನ್ನು ಜಿಪಿಟಿ ಹುದ್ದೆಗಳಿಗಾಗಿ ಸೇವಾ ಜೇಷ್ಠತೆಯೊಂದಿಗೆ ವಿಲೀನಗೊಳಿಸುವ ಮೂಲಕ ನ್ಯಾಯ ದೊರಕಿಸಿಕೊಡುವಂತೆ ಒತ್ತಾಯಿಸಿ ಮನವಿ ಸಲ್ಲಿಸಿದರು.
ಸಂಘದ ಅಧ್ಯಕ್ಷ ಟಿ.ಪೃಥ್ವಿರಾಜ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೈ.ಎನ್.ಶ್ರೀಧರ್ ಗೌಡ, ಎಸ್.ಕೆ.ಮೋಹನ್, ಸೌಭಾಗ್ಯಾ, ಶ್ರೀಧರ್, ಹನುಮಂತಪ್ಪ, ಜಯರಾಂ ಆರ್.ನಾಯಕ್, ರಾಜೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net