

ವಿಜಯವಾಣಿ ಸುದ್ದಿಜಾಲ ಕೋಟ
ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯು ಬುಧವಾರ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಅಧ್ಯಕ್ಷೆ ಸುಕನ್ಯಾ ಶೆಟ್ಟಿ ಅಧ್ಯಕ್ಷತೆಯಲ್ಲಿ ಜರುಗಿತು.
ಸಾಲಿಗ್ರಾಮ ಪಟ್ಟಣ ಪಂಚಾಯಿತಿಯ ಅಂಗಡಿ ಕೋಣೆಗಳ ಮಾಸಿಕ ಬಾಡಿಗೆ ಆಧಾರದಲ್ಲಿ ನಡೆಸುವ ಅವಧಿ ಮುಗಿದಿದ್ದು, ಮುಂದಿನ 12 ವರ್ಷದ ಅವಧಿಗೆ ಬಹಿರಂಗ ಏಲಂ ಕುರಿತು ಚರ್ಚೆ ಆರಂಭವಾಯಿತು. ಆಡಳಿತ ಪಕ್ಷ ಬಿಜೆಪಿ ಸದಸ್ಯ ಶ್ಯಾಮಸುಂದರ ನಾಯರಿ ಮಾತನಾಡಿ, ಏಲಂ ಪ್ರಕ್ರಿಯೆ ಸಮರ್ಪಕವಾಗಿ ನಡೆದಿಲ್ಲ ಪ್ರಸ್ತುತ ಏಲಂ ರದ್ದುಪಡಿಸಿ ಕೌನ್ಸಿಲರ್ ಸಮ್ಮುಖದಲ್ಲಿ ಮರು ಏಲಂ ಪ್ರಕ್ರಿಯೆ ನಡೆಸಬೇಕು ಎಂದು ಆಗ್ರಹಿಸಿದರು.
ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಆಡಳಿತ ಪಕ್ಷದ ರಾಜು ಪೂಜಾರಿ ಇಲ್ಲಿಯವರೆಗೆ ಮೂರು ಬಾರಿ ಅಂಗಡಿ ಕೋಣೆ ಬಾಡಿಗೆಗಾಗಿ ಏಲಂ ಕರೆಯಲಾಗಿದೆ. ಪುನಃ ಕರೆಯಲು ಕಾನೂನಿನಲ್ಲಿ ಅವಕಾಶ ಇದೆಯೇ. ಕರೆಯುವುದಾದರೆ ನಿಯಮ ಪ್ರಕಾರ ಕರೆಯಿರಿ. ಪ್ರಸ್ತುತ 8 ಸಾವಿರ ಬಾಡಿಗೆಗೆ ಬಾರದಿದ್ದವರು ಇನ್ನೂ ಹೆಚ್ಚಿನ ದರದಲ್ಲಿ ಬಾಡಿಗೆ ನಿಗದಿ ಮಾಡಿದರೆ ಬರುತ್ತಾರೆಯೇ ಎಂದು ಪ್ರಶ್ನಿಸಿದರು. ಇದಕ್ಕೆ ಸದಸ್ಯ ಸಂಜೀವ ದೇವಾಡಿಗ ಧ್ವನಿಗೂಡಿಸಿದರು.
ಈ ಸಂದರ್ಭ ಶ್ಯಾಮಸುಂದರಿ ನಾಯರಿ ಮತ್ತು ಕಾರ್ಕಡ ರಾಜು ಪೂಜಾರಿ ನಡುವೆ ಬಿಸಿ ಬಿಸಿ ಚರ್ಚೆ ನಡೆಯಿತು. ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಮುಖ್ಯಾಧಿಕಾರಿ ಅಜಯ್ ಭಂಡಾರ್ಕಾರ್, ಸರ್ಕಾರದ ನಿಯಮದಂತೆ ಶೇ.25 ಕಡಿಮೆಗೊಳಿಸಿ ಜಿಲ್ಲಾಧಿಕಾರಿಗಳ ಒಪ್ಪಿಗೆ ಪಡೆದು ಅಂಗಡಿ ಕೋಣೆಗಳ ಏಲಂ ಪ್ರಕ್ರಿಯೆಯನ್ನು ಮಾಡುವ ನಿರ್ಧಾಕ್ಕೆ ಬರೋಣ ಎಂದರು.
ನಿಯಮದಲ್ಲಿ ತಾರತಮ್ಯ: ಸಾಲಿಗ್ರಾಮ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ವಾಣಿಜ್ಯ ಉದ್ದೇಶಕ್ಕೆ ಭೂ ಪರಿವರ್ತನೆ ಮಾಡಿದ ಸ್ಥಳದಲ್ಲಿ ಕಟ್ಟಡವಿದ್ದರೂ ಭೂ ಪರಿವರ್ತನೆಯನ್ನು ರದ್ದು ಪಡಿಸುವ ಅಧಿಕಾರ ಕಂದಾಯ ಇಲಾಖೆಗೆ ಇದೆಯೇ ಎಂದು ಸದಸ್ಯ ಕಾರ್ಕಡ ರಾಜು ಪೂಜಾರಿ ಪ್ರಶ್ನಿಸಿದರು. ಬಡವರಿಗೊಂದು ಶ್ರೀಮಂತರಿಗೊಂದು ಕಾನೂನನ್ನು ಮಾಡಬೇಡಿ. ಅವಕಾಶ ಇದ್ದರೇ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಎಲ್ಲರಿಗೂ ಒಂದೇ ನಿಯಮವನ್ನು ಪಾಲಿಸಿ ಎಂದು ಆಗ್ರಹಿಸಿದರು.
ಪಕ್ಷೇತರ ಸದಸ್ಯೆ ರತ್ನಾ ನಾಗರಾಜ ಗಾಣಿಗ ಮಾತನಾಡಿ, ಪಟ್ಟಣ ಪಂಚಾಯಿತಿಯಿಂದ ಸಾಲಿಗ್ರಾಮ ಪ್ರಾಣಿ ಸಂಗ್ರಹಾಲಯಕ್ಕೆ ಪದೇ ಪದೇ ನೋಟಿಸ್ ನೀಡುವ ಅಗತ್ಯತೆ ಇದೆಯೇ ಎಂದು ಪ್ರಶ್ನಿಸಿದಾಗ, ಮುಖ್ಯಾಧಿಕಾರಿ ಅಜಯ್ ಭಂಡಾರ್ಕಾರ್ ಉತ್ತರಿಸಿ, ನಾವು ಅವರಿಗೆ ಸ್ವಚ್ಛತೆಯ ಕಡೆಗೆ ಗಮನಹರಿಸುವಂತೆ ಹಾಗೂ ಅನುಮತಿ ಪಡೆದು ಪ್ರಾಣಿಗಳನ್ನು ಸಾಕುವಂತೆ ಜಿಲ್ಲಾಧಿಕಾರಿ ಸೂಚನೆಯಂತೆ ನೋಟಿಸ್ ನೀಡಲಾಗಿದೆ ಎಂದರು.
ಸಭೆಯಲ್ಲಿ ಉಪಾಧ್ಯಕ್ಷೆ ಗಿರಿಜಾ ಪೂಜಾರಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಅನುಸೂಯ ಆನಂದರಾಮ ಹೇರ್ಳೆ ಮೊದಲಾದವರು ಉಪಸ್ಥಿತರಿದ್ದರು.
ಕಾಂಗ್ರೆಸ್ ಸದಸ್ಯ ಪುನೀತ್ ಮಾತನಾಡಿ, ಹಣ ಇದೆ ಎಂದು ಸ್ಮಶಾನಗಳ ಅಭಿವೃದ್ಧಿಗೆ ಬಳಸಿದರೆ ಅದರ ನಿರ್ವಹಣೆ ಮಾಡುವವರು ಯಾರು ಎಂದು ಪ್ರಶ್ನಿಸಿದರು. ಸದಸ್ಯ ಸಂಜೀವ ದೇವಾಡಿಗ ಉತ್ತರಿಸಿ, ಸಾಲಿಗ್ರಾಮದಲ್ಲಿ ಒಟ್ಟು 7 ಸ್ಮಶಾನಗಳಿದ್ದು, ಅವುಗಳ ನಿರ್ವಹಣೆಗೆ ಆಯಾ ವಾರ್ಡ್‌ಗಳ ಕೌನ್ಸಿಲರ್‌ಗಳ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿ ಸ್ಮಶಾನಗಳ ಅಭಿವೃದ್ಧಿ ನಡೆಸುವ ನಿಟ್ಟಿನಲ್ಲಿ ಎಲ್ಲ ಸದಸ್ಯರು ಯೋಚಿಸಬೇಕು ಎಂದರು.