

ಮಡಿಕೇರಿ: ಮೂರ್ನಾಡಿನಿಂದ ಅಮೃತ್ತಿ, ವೀರಾಜಪೇಟೆಗೆ ಐಕೊಳ-ಕೊಂಡಂಗೇರಿ ಮೂಲಕ ಸಾಗುವ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಶೀಘ್ರವಾಗಿ ಮರುಡಾಂಬರೀಕರಣ ಮಾಡಬೇಕು ಎಂದು ಐಕೊಳ ಗ್ರಾಮಸ್ಥರು ಒತ್ತಾಯಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂರ್ನಾಡು ನಗರದ ಆರಂಭದಿಂದಲೇ ದೊಡ್ಡ ದೊಡ್ಡ ಗುಂಡಿಗಳಿಂದ ರಸ್ತೆ ತುಂಬಿದೆ. ವಾಹನಗಳ ಪ್ರಯಾಣಕ್ಕೆ ತುಂಬಾ ಕಷ್ಟವಾಗಿದೆ. ಸಂಬಂಧಪಟ್ಟ ಇಲಾಖೆ ಗುಂಡಿಮುಚ್ಚುವ ಕಾರ್ಯಕ್ಕೆ ಮುಂದಾಗದೇ ಮರುಡಾಂಬರೀಕರಣ ಮಾಡಬೇಕು. ಇಲ್ಲದಿದ್ದಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರೊಂದಿಗೆ ರಸ್ತೆ ತಡೆ ಮಾಡಿ ಪ್ರತಿಭಟಿಸಲಾಗುವುದು ಎಂದು ಗ್ರಾಮಸ್ಥ ಪಳಂಗಂಡ ಮುದ್ದಪ್ಪ ಎಚ್ಚರಿಸಿದರು.
ರಸ್ತೆಯು ತೀರಾ ಹದಗೆಟ್ಟ ಹಿನ್ನೆಲೆ ಅನಾರೋಗ್ಯಸ್ಥರನ್ನು ಆಸ್ಪತ್ರೆಗೆ ಸಾಗಿಸಲು ಸಮಸ್ಯೆಯಾಗುತ್ತಿದೆ. ಅಲ್ಲದೇ ವಾಹನಗಳು ಜಖಂ ಆಗುತ್ತಿದೆ. ಆಟೋ ಚಾಲಕರು ದುಪ್ಪಟ್ಟು ಬಾಡಿಗೆ ನೀಡಿದರೆ ಮಾತ್ರ ಬರುವುದಾಗಿ ಹೇಳುತ್ತಾರೆ. ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ಜನಪ್ರತಿನಿಧಿಗಳು ಕಾಳಜಿ ವಹಿಸುತ್ತಿಲ್ಲ ಎಂದು ದೂರಿದರು.
ಗುಂಡಿಬಿದ್ದ ರಸ್ತೆಗೆ ೩ ಲಕ್ಷ ಅನುದಾನ ಬಿಡುಗಡೆಯಾಗಿದೆ. ಈ ಹಣದಲ್ಲಿ ಯಾವುದೇ ಕಾಮಗಾರಿ ಮಾಡಲು ಸಾಧ್ಯವಾಗುವುದಿಲ್ಲ. ಗುತ್ತಿಗೆದಾರ ಈ ಹಣದಲ್ಲಿ ಗುಣಮಟ್ಟದ ರಸ್ತೆ ನೀಡಲು ಸಾಧ್ಯವಿಲ್ಲ. ಈ ಹಿನ್ನೆಲೆ ಸಂಬಂಧಪಟ್ಟ ಇಲಾಖೆಯಿಂದ ಹೆಚ್ಚಿನ ಅನುದಾನ ನೀಡಿ ಸಮಸ್ಯೆಗೆ ಮುಕ್ತಿ ಹಾಡಬೇಕು ಎಂದು ಮನವಿ ಮಾಡಿದರು.
ಚರಂಡಿಯಿಲ್ಲ: ಮಳೆಗಾಲ ಸಂದರ್ಭದಲ್ಲಿ ಜಲಾವೃತವಾಗುವ ಪ್ರದೇಶದ ಇಕ್ಕೆಲಗಳಲ್ಲಿ ಒಳಚರಂಡಿ ವ್ಯವಸ್ಥೆ ಸರಿಯಿಲ್ಲದೇ ನೀರು ರಸ್ತೆಯ ಮೇಲೆ ಹರಿದಾಡುತ್ತದೆ. ಪರಿಣಾಮ ರಸ್ತೆ ಹಾಳಾಗುತ್ತಿದೆ. ವರ್ಷಂಪ್ರತಿ ಇದೇ ಗೋಳಾಗಿದ್ದು, ಖಾಯಂ ಪರಿಹಾರಕ್ಕೆ ಮುಂದಾಗುತ್ತಿಲ್ಲ ಎಂದು ದೂರಿದರು.
ಸುದ್ದಿಗೋಷ್ಠಿಯಲ್ಲಿ ಐಕೊಳ ಗ್ರಾಮಸ್ಥರಾದ ಪಳಂಗಂಡ ಕಾರ್ಯಪ್ಪ, ಮಾಳೇಟಿರ ಮೇದಪ್ಪ, ಮುಕ್ಕಾಟಿರ ಶಿವಕುಮಾರ್ ಕಾರ್ಯಪ್ಪ, ಪಳಂಗಂಡ ಲವಕುಮಾರ್, ಪಳಂಗಂಡ ತಮ್ಮಯ್ಯ ಉಪಸ್ಥಿತರಿದ್ದರು.