ಮೂಲ ಸೌಕರ್ಯ ಒದಗಿಸುವಂತೆ ಆಗ್ರಹ

Demand for provision of basic facilities
Published on

ಇಳಕಲ್ಲ (ಗ್ರಾ):ಕುಡಿಯುವ ನೀರು, ಚರಂಡಿ ಸೇರಿ ವಿವಿಧ ಮೂಲ ಸೌಕರ್ಯ ಒದಗಿಸುವಂತೆ ಆಗ್ರಹಿಸಿ ತಾಲೂಕಿನ ಸಂಕ್ಲಾಪುರ ಗ್ರಾಮಸ್ಥರು ತಹಸೀಲ್ದಾರ್​ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.ಪ್ರತಿಭಟನಾ ಮೆರವಣಿಗೆ ಮೂಲಕ ತಹಸೀಲ್ದಾರ್​ ಕಚೇರಿಗೆ ಆಗಮಿಸಿದ ಗ್ರಾಮಸ್ಥರು ಉಪ ತಹಸೀಲ್ದಾರ್​ ಈಶ್ವರ ಗಡ್ಡಿ ಅವರಿಗೆ ಮನವಿ ಸಲ್ಲಿಸಿದರು.

ಮುಖಂಡರಾದ ಪರಶುರಾಮ ಬಾದವಾಡಗಿ ಮಾತನಾಡಿ, ಸಂಕ್ಲಾಪುರ ಗ್ರಾಮ ರ್ನಿಲಕ್ಷಕ್ಕೆ ಒಳಗಾಗಿದೆ. ಕುಡಿಯುವ ನೀರು ಸಮರ್ಪಕವಾಗಿ ಬರುತ್ತಿಲ್ಲ. ನೀರು ಬಂದರೂ ಅದು ಕಲುಷಿತವಾಗಿದೆ. ಚರಂಡಿಗಳು ಗಬ್ಬೆದ್ದು ನಾರುತ್ತಿವೆ. ಮಳೆ ಬಂದರೆ ಉಕ್ಕಿ ರಸ್ತೆಯ ತುಂಬೆಲ್ಲ ಗಲೀಜು ನೀರು ಹರಡುತ್ತದೆ. ಕುಡಿಯುವ ನೀರಿನ ನಲ್ಲಿಗಳು ಹಾಳಾಗಿದ್ದು, ಸರಿಪಡಿಸುತ್ತಿಲ್ಲ. ಕೂಡಲೇ ಈ ಬಗ್ಗೆ ಅಧಿಕಾರಿಗಳು ಗಮನ ಹರಿಸಬೇಕು. ಗ್ರಾಮ ಪಂಚಾಯಿತಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು ಎಂದು ಆಗ್ರಹಿಸಿದರು.

ಗ್ರಾಮದ ಸರ್ವೇ ನಂ. 35/2 3 ಎಕರೆ ಇದ್ದು, ಸರ್ಕಾರ ಹಾಗೂ ಖಾಸಗಿ ವ್ಯಕ್ತಿಯ ನಡುವೆ ಗುದ್ದಾಟಕ್ಕೆ ಕಾರಣವಾಗಿ ಗ್ರಾಮದಲ್ಲಿ ಗೊಂದಲ ವಾತಾವರಣ ಸೃಷ್ಟಿಯಾಗಿದೆ. ಹೀಗಾಗಿ ಭೂಮಾಪನಾ ಇಲಾಖಾ ಅಧಿಕಾರಿಗಳಿಂದ ಅಳತೆ ಮಾಡಿಸಿ ಗಡಿಗಳನ್ನು ಗುರುತಿಸುವಂತೆ ಗ್ರಾಮಸ್ಥರು ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಉಪತಹಸೀಲ್ದಾರ್​ ಈಶ್ವರ ಗಡ್ಡಿ, ಮೇಲಧಿಕಾರಿಗಳಿಗೆ ಈ ಎಲ್ಲ ವಿಷಯಗಳನ್ನು ಗಮನಕ್ಕೆ ತರಲಾಗುವುದು. ಶ್ರೀದಲ್ಲಿ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಪ್ರತಿಭಟನೆಯಲ್ಲಿ ಹುಲ್ಲಪ್ಪ ಕಮರಿ, ಚೆನ್ನಪ್ಪ ಬಾದವಾಡಗಿ, ಶರಣಪ್ಪ ಕಮರಿ, ಮರಿಯಪ್ಪ ಉಸಲಕೊಪ್ಪ, ಬಸವರಾಜ ಬಾದವಾಡಗಿ, ಶಂಕ್ರಪ್ಪ ವಡ್ಡರ, ತಿಪ್ಪಣ್ಣ ಕಂಬಳಿ ಇದ್ದರು.

ಇಳಕಲ್ಲದ ತಹಸೀಲ್ದಾರ್​ ಕಚೇರಿ ಆವರಣದಲ್ಲಿ ಸಂಕ್ಲಾಪುರ ಗ್ರಾಮಸ್ಥರು ಉಪತಹಸೀಲ್ದಾರ್​ ಈಶ್ವರ ಗಡ್ಡಿಗೆ ಮನವಿ ಸಲ್ಲಿಸಿದರು. ಪರಶುರಾಮ ಬಾದವಾಡಗಿ, ಹುಲ್ಲಪ್ಪ ಕಮರಿ, ಚೆನ್ನಪ್ಪ ಬಾದವಾಡಗಿ, ಶರಣಪ್ಪ ಕಮರಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net