ಪರಿಶಿಷ್ಟ ಕಲ್ಯಾಣದ ಹಣ ಸದ್ಬಳಕೆಗೆ ಆಗ್ರಹ

Demand for proper utilization of Scheduled Welfare funds
ಪರಿಶಿಷ್ಟ ಕಲ್ಯಾಣದ ಹಣ ಸದ್ಬಳಕೆಗೆ ಜಿಲ್ಲಾಕಾರಿ ಸಂಗಪ್ಪ ಎಂ. ಅವರಿಗೆ ಮನವಿ ಪತ್ರ ಸಲ್ಲಿಸುತ್ತಿರುವ ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಕೀರಪ್ಪ ಮಾದರ (ಹಿರೇಶೆಲ್ಲಿಕೇರಿ), ಸಮಿತಿಯ ಪದಾಧಿಕಾರಿಗಳು ಇದ್ದಾರೆ.
Published on

ಕಲಾದಗಿ: ಎಸ್‌ಸಿಪಿ ಮತ್ತು ಟಿಎಸ್ಪಿ ಕಾಯ್ದೆಯ ಕಲಂ7 ಸಿ ಯನ್ನು ರದ್ದುಗೊಳಿಸಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ ಮೀಸಲಿಟ್ಟ ಹಣವನ್ನು ಆ ಸಮುದಾಯದ ಜನಗಳ ಕಲ್ಯಾಣಕ್ಕೆ ಮಾತ್ರ ವಿನಿಯೋಗಿಸಬೇಕು ಎಂದು ಆಗ್ರಹಿಸಿ ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಸಮೀಪದ ಹಿರೇಶೆಲ್ಲಿಕೇರಿಯ ಕೀರಪ್ಪ ಮಾದರ (ಹಿರೇಶೆಲ್ಲಿಕೇರಿ) ಹಾಗೂ ಸಮಿತಿ ಪದಾಧಿಕಾರಿಗಳು ಬಾಗಲಕೋಟೆ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನರ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗಾಗಿ 2013ರಲ್ಲಿ ಜಾರಿಗೆ ತಂದ ಕಾಯ್ದೆಯನ್ನು ರಾಜ್ಯಾದ್ಯಂತ ಹಾಗೂ ಜಿಲ್ಲೆಯಲ್ಲೂ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು. ಈ ಕಾಯ್ದೆಯ ಕಲಂ 7ಡಿ ಮತ್ತು 7ಸಿ ಅಡಿಯಲ್ಲಿ ಮೀಸಲಿಟ್ಟ ಅನುದಾನವನ್ನು ಇತರೆ ಯೋಜನೆಗಳಿಗೆ ಬಳಸಲು ಅವಕಾಶವಿರುವುದನ್ನು ಖಂಡಿಸಿ ಸಂಘಟನೆಯಿಂದ ನಿರಂತರ ಹೋರಾಟ ಮಾಡಿಕೊಂಡು ಬರಲಾಗುತ್ತಿದೆ. ಆದರೂ ಈ ಕಲಂಗಳನ್ನು ರದ್ದುಗೊಳಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

2024-25 ಮತ್ತು 2025-26ರ ಸಾಲಿನಲ್ಲೂ ಗ್ಯಾರಂಟಿ ಯೋಜನೆ ಜಾರಿಯಲ್ಲಿದ್ದು ಪ್ರಸಕ್ತ ವರ್ಷವೂ ಎಸ್ಸಿಪಿ ಮತ್ತು ಟಿಎಸ್ಪಿ ಅನುದಾನವನ್ನು ಈ ಯೋಜನೆಗಳಿಗೆ ಹಣವನ್ನು ಬಳಸಲಾಗುತ್ತಿದೆ, ಕಳೆದ 11 ವರ್ಷದಲ್ಲಿ ಪರಿಶಿಷ್ಟರಿಗೆಂದೇ ಅಂದಾಜು 4 ಲಕ್ಷ ಕೋಟಿಗೂ ಅಧಿಕ ಹಣ ನೀಡಿದರೂ ಅದನ್ನು ಅನ್ಯ ಯೋಜನೆ ಉದ್ದೇಶಗಳಿಗೆ ಬಳಸಲಾಗಿದೆ, ಪರಿಶಿಷ್ಟ ಕಲ್ಯಾಣಕ್ಕಾಗಿ ಮೀಸಲಿಟ್ಟ ಹಣವನ್ನು ಬೇರೆ ಯಾವುದೇ ಯೋಜನೆಗಳಿಗೆ ಬಳಸದೆ ಕೇವಲ ಪರಿಶಿಷ್ಠರ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಅಭಿವೃದ್ಧಿ ಕಲ್ಯಾಣಕ್ಕಾಗಿ ವಿನಿಯೋಗಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.

ಮುಖಂಡರಾದ ರಮೇಶ ಅನಗವಾಡಿ, ರಾಮಪ್ಪ ಐಹೊಳೆ, ಶಿವರಾಜ್ ತೆಗ್ಗಿ, ಮುತ್ತು ಮಡಿವಾಳ, ಮಂಜು ಭಜಂತ್ರಿ, ನಂದಾ ಚವಾನ್, ಶಂಕರ್ ಸಿಂಗ್ ರಜಪೂತ, ಮುದುಕಪ್ಪ ಹುನಗುಂದ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net