ದರ ಕುಗ್ಗಿದರೂ ಗಿಡಗಳಿಗೆ ಹಿಗ್ಗದ ಬೇಡಿಕೆ

plants at Ramangara Forest Nursery
Published on

ಮಳೆ ಕೊರತೆಯಿಂದಾಗಿ ಅರಣ್ಯ ಕೃಷಿಗೆ ಹೊಡೆತ ನರ್ಸರಿಯಲ್ಲೇ ಉಳಿದ 96 ಸಾವಿರ ಗಿಡಗಳು

ವಿಭೂತಿಕೆರೆ ಶಿವಲಿಂಗಯ್ಯ ರಾಮನಗರ

ಮುಂಗಾರು ಮಳೆ ಕೈಕೊಟ್ಟ ಪರಿಣಾಮ ಅರಣ್ಯ ಇಲಾಖೆ ಬೆಳೆಸಿದ ಗಿಡಗಳು ಅರ್ಧಕ್ಕರ್ಧ ರ್ಖಚಾಗದೆ ನರ್ಸರಿಯಲ್ಲೇ ಉಳಿದು ಪೂರ್ಣ ಪ್ರಮಾಣದ ಅರಣ್ಯ ಕೃಷಿಗೆ ಹೊಡೆತ ನೀಡಿದೆ.

ಅರಣ್ಯ ಕೃಷಿ ಪೋತ್ಸಾಹಿಸುವ ಸಲುವಾಗಿ ರೈತರಿಗೆ ನರೇಗಾ ಯೋಜನೆ ಮತ್ತು ಕಡಿಮೆ ದರದಲ್ಲಿ ಸಾರ್ವಜನಿಕರಿಗೆ ಗಿಡ ವಿತರಿಸಲು ಇಲಾಖೆ ಮತ್ತು ಸಾಮಾಜಿಕ ಅರಣ್ಯ ಇಲಾಖೆಗಳು ವರ್ಷಪೂರ್ತಿ ಸಾವಿರಾರು ಗಿಡಗಳನ್ನು ಬೆಳೆಸುತ್ತವೆ. ನರ್ಸರಿಗಳಲ್ಲಿ ಬೆಳೆಸಿದ ಗಿಡಗಳನ್ನು ಪ್ರತಿವರ್ಷ ಜೂನ್​, ಜುಲೈ ತಿಂಗಳಿನಲ್ಲಿ ರೈತರಿಗೆ ಉಚಿತವಾಗಿ ವಿತರಿಸಲಾಗುತ್ತದೆ. ಆದರೆ, ಈ ಬಾರಿ ಮುಂಗಾರು ಕೈಕೊಟ್ಟ ಪರಿಣಾಮ ರೈತರು ಗಿಡಗಳನ್ನು ಕೊಳ್ಳಲು ಮುಂದಾಗದ ಕಾರಣ ಗಿಡಗಳು ಖಾಲಿಯಾಗದೆ ಉಳಿದಿವೆ.

ನರ್ಸರಿಯಲ್ಲಿ ಬೆಳೆಸಿದ ಗಿಡಗಳು ಕೃಷಿಗೆ ಪೂರಕವಾಗುವಂತೆ ಸಾಮಾಜಿಕ ವಲಯ ಅರಣ್ಯ ಇಲಾಖೆ ರೈತರನ್ನು ಗಿಡ ನೆಡುವಂತೆ ಸ್ವಯಂ ಸೇವಾ ಸಂಸ್ಥೆಗಳ ಮೂಲಕ ಮನೆ ಮನೆಗೆ ಭೇಟಿ ನೀಡಿ ಅರಣ್ಯ ಕೃಷಿಗೆ ಒತ್ತು ನೀಡುವಂತೆ ಪ್ರೇರೇಪಿಸಲು ಮುಂದಾಗಿದೆ.

ನರ್ಸರಿಯಲ್ಲೇ ಉಳಿದ 96 ಸಾವಿರ ಗಿಡಗಳು

ರಾಮನಗರ ತಾಲೂಕು ಸಾಮಾಜಿಕ ವಲಯ ಅರಣ್ಯ ವಿಭಾಗ ಒಂದರಲ್ಲೇ ಈ ಬಾರಿ ನರೇಗಾ ಯೋಜನೆಯಲ್ಲಿ 9 x12 ಇಂಚು ಅಳತೆಯ 50 ಸಾವಿರ ಗಿಡಗಳನ್ನು ಬೆಳೆಸಿದ್ದು ಈ ಪೈಕಿ 16 ಸಾವಿರ ಗಿಡಗಳನ್ನು ರೈತರು ಪಡೆದಿದ್ದರೆ, 34 ಸಾವಿರ ಗಿಡಗಳು ಉಳಿದಿವೆ.

ಅದೇರೀತಿ ರಿಯಾಯಿತಿ ದರದಲ್ಲಿ ಸಾರ್ವಜನಿಕ ವಿತರಣೆಗೆ ಬೆಳೆಸಿದ್ದ 9 ಇಂಚು ಅಳತೆಯ 30 ಸಾವಿರ, 8 x 12 ಇಂಚು ಅಳತೆಯ 60 ಸಾವಿರ ಗಿಡಗಳಲ್ಲಿ ಒಟ್ಟು 28 ಸಾವಿರ ಗಿಡಗಳು ರ್ಖಚಾಗಿದ್ದು 62 ಸಾವಿರ ಗಿಡಗಳು ಉಳಿದಿವೆ. ಪ್ರತಿವರ್ಷ ಜೂನ್​ನಲ್ಲೇ ಗಿಡಗಳಿಗೆ ರೈತರಿಂದ ಬೇಡಿಕೆ ಬರುತ್ತಿತ್ತು. ಆದರೆ, ಈ ಬಾರಿ ಅಕ್ಟೋಬರ್​ ಬಂದರೂ ಬೇಡಿಕೆ ಬಂದಿಲ್ಲ.

ಕಳೆದ ಬಾರಿ ನರೇಗಾ ಯೋಜನೆಯಲ್ಲಿ 1 ಲಕ್ಷ ಮತ್ತು ರಿಯಾಯಿತಿ ದರದಲ್ಲಿ ಸಾರ್ವಜನಿಕ ವಿತರಣೆಗೆ ಬೆಳೆಸಿದ 75 ಸಾವಿರ ಗಿಡಗಳು ರ್ಖಚಾಗಿದ್ದವು. ಈ ಬಾರಿ ಮಳೆ ಕೊರತೆ ಕಾರಣ ರೈತರು, ಸಾರ್ವಜನಿಕರು ಗಿಡ ಖರೀದಿಗೆ ಮುಂದೆ ಬಂದಿಲ್ಲ. ಹಾಗಾಗಿ ಗಿಡಗಳು ಉಳಿದಿವೆ ಎನ್ನುತ್ತಾರೆ ಅರಣ್ಯ ಇಲಾಖೆ ಅಧಿಕಾರಿಗಳು.

ನರೇಗಾ ನೆರವು

ಜಮೀನು, ಖಾಲಿ ಜಾಗ, ಬದು, ಒಡ್ಡುಗಳಲ್ಲಿ ಗಿಡ ನೆಡಲು ರೈತರಿಗೆ ಅನುಕೂಲವಾಗುವಂತೆ ಅರಣ್ಯ ಕೃಷಿ ಉತ್ತೇಜಿಸುವ ಸಲುವಾಗಿ ಸರ್ಕಾರ ನರೇಗಾ ಯೋಜನೆಯಲ್ಲಿ ಉಚಿತ ಗಿಡ ವಿತರಣೆ ಮತ್ತು ನಾಟಿ ಮಾಡಿದ ಗಿಡ ಒಂದಕ್ಕೆ 107 ರೂ. ನೀಡುತ್ತದೆ. 1 ಎಕರೆಗೆ 40 ಗಿಡ ನೀಡಲಾಗುತ್ತದೆ. ರಾಮನಗರ ತಾಲೂಕಿನ 20 ಗ್ರಾಮ ಪಂಚಾಯಿತಿಗಳಲ್ಲಿ 100 ಫಲಾನುಭವಿ ರೈತರು ಯೋಜನೆ ಲಾಭ ಪಡೆದಿದ್ದಾರೆ. ರಿಯಾಯಿತಿ ದರದಲ್ಲಿ ಕೇವಲ 78 ರೈತರು ಮಾತ್ರ ಗಿಡ ಖರೀದಿಸಿದ್ದಾರೆ.

ಬೆಳೆಸಿರುವ ಗಿಡಗಳು
ಹೆಬ್ಬೇವು, ಮಹಾಗನಿ, ಅೆ, ಹುಣಸೆ, ಹಲಸು, ಗೇರು, ಬೇವು, ಬಿದಿರು, ಶ್ರೀಗಂಧ, ರಕ್ತಚಂದನ, ಜಂಬುನೇರಳೆ, ನೆಲ್ಲಿ.

ದರ ಪರಿಷ್ಕರಿಸಿದರೂ ಹಿಗ್ಗದ ಬೇಡಿಕೆ

ಕಳೆದ ಏಪ್ರಿಲ್​ನಲ್ಲಿ ಮುಂಗಾರು ಆರಂಭಕ್ಕೂ ಮುನ್ನ 3 ರೂ. ಇದ್ದ ಗಿಡಕ್ಕೆ ಒಂದೇ ಬಾರಿ 23 ರೂ., 1 ರೂ. ಇದ್ದ ಗಿಡಕ್ಕೆ 5ರಿಂದ 6 ರೂ. ಹೀಗೆ ದುಪ್ಪಟ್ಟು ದರ ನಿಗದಿ ಮಾಡಿ ಅರಣ್ಯ ಇಲಾಖೆ ಸಸಿ ವಿತರಣೆಗೆ ಮುಂದಾಗಿತ್ತು. ಆದರೆ ರೈತರು, ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿದ್ದರಿಂದ 5&6 ರೂ. ಇದ್ದ ಗಿಡಗಳಿಗೆ 2 ರೂ. ಹಾಗೂ 23 ರೂ. ಬೆಲೆಯ ಗಿಡಕ್ಕೆ 6 ರೂ. ನಿಗದಿ ಮಾಡಿ ಪರಿಷ್ಕರಣೆ ಮಾಡಲಾಗಿದೆ. ಆದರೂ, ಮಳೆ ಕೊರತೆಯಿಂದಾಗಿ ರೈತರು ಗಿಡ ಖರೀದಿಗೆ ಹಿಂದೇಟು ಹಾಕಿದ್ದಾರೆ.

Mallesh Forest Range officer
ಮಳೆ ಕೊರತೆಯಿಂದ ರೈತರು, ಸಾರ್ವಜನಿಕರು ಸಸಿಗಳನ್ನು ಖರೀದಿಸದ ಕಾರಣ ಬೆಳೆಸಿದ್ದ ಗಿಡಗಳು ನರ್ಸರಿಯಲ್ಲೇ ಉಳಿದಿವೆ. ಕಳೆದ ಮೂರು ದಿನಗಳಿಂದ ಮಳೆ ಆಗುತ್ತಿದ್ದು ಸ್ವಯಂ ಸೇವಾ ಸಂಸ್ಥೆಗಳ ಮೂಲಕ ರೈತರ ಮನೆ ಬಾಗಿಲಿಗೆ ತೆರಳಿ ನರೇಗಾ ಯೋಜನೆ ಮೂಲಕ ಗಿಡ ನೆಡಲು ರೈತರನ್ನು ಪ್ರೇರೇಪಿಸುವ ಕೆಲಸವನ್ನು ಸಾಮಾಜಿಕ ಅರಣ್ಯ ಇಲಾಖೆ ಮಾಡಲಿದೆ.

ಮಲ್ಲೇಶ್​, ವಲಯ ಅರಣ್ಯಾಧಿಕಾರಿ, ಸಾಮಾಜಿಕ ಅರಣ್ಯ ವಿಭಾಗ, ರಾಮನಗರ

chandra giri Farmer
ಅರಣ್ಯ ಕೃಷಿಗೆ ಉತ್ತಮ ಮಳೆ ಬೇಕು. ಈ ಬಾರಿ ಮಳೆ ಕೊರತೆಯಿಂದಾಗಿ ಜಿಲ್ಲೆಯ ಪ್ರಮುಖ ಬೆಳೆಗಳಲ್ಲಿ ಒಂದಾಗಿರುವ ರಾಗಿ, ಭತ್ತ, ಜೋಳ, ಹುರುಳಿ ಫಸಲು ಕೂಡ ಸಮರ್ಪಕವಾಗಿ ಬಿತ್ತನೆ ಆಗಿಲ್ಲ. ಗಿಡ ನೆಟ್ಟರೂ ನೀರಿಲ್ಲದೆ ಒಣಗುತ್ತವೆ. ಮುಂದೆ ನರೇಗಾ ಯೋಜನೆಯಲ್ಲಿ ಸವಲತ್ತು ಪಡೆಯಲು ದಾಖಲಾತಿಯಲ್ಲಿ ತೊಂದರೆ ಉಂಟಾಗುತ್ತದೆ. 
 ಚಂದ್ರಗಿರಿ, ದೇವರದೊಡ್ಡಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net