

ವಿಜಯವಾಣಿ ಸುದ್ದಿಜಾಲ ಧಾರವಾಡ
ಸರ್ಕಾರ ಉತ್ತರ ಕರ್ನಾಟಕ ಗುತ್ತಿಗೆದಾರರ ಸುಮಾರು 20 ಸಾವಿರ ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡಿದೆ. ಇದರಿಂದ ಗುತ್ತಿಗೆದಾರರು ಆರ್ಥಿಕವಾಗಿ ಸಂಕಷ್ಟ ಎದುರಿಸುತ್ತಿದ್ದಾರೆ. ಕೂಡಲೇ ಬಾಕಿ ಹಣ ಬಿಡುಗಡೆ ಮಾಡಬೇಕು ಎಂದು ಉತ್ತರ ಕರ್ನಾಟಕ ಸಿವಿಲ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಸುಭಾಷ ಪಾಟೀಲ ಆಗ್ರಹಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕೋಪಯೋಗಿ, ಬೃಹತ್ ನೀರಾವರಿ, ಸಣ್ಣ ನೀರಾವರಿ ಇಲಾಖೆಗಳು ಹೆಚ್ಚು ಬಾಕಿ ಉಳಿಸಿಕೊಂಡಿವೆ. ಬಾಕಿ ಬಿಲ್ ಪಾವತಿಸುವವರೆಗೆ ಹೊಸ ಟೆಂಡರ್‌ಗಳನ್ನು ಕರೆಯಬಾರದು. ಕಾಮಗಾರಿಯ ಹಣ ಇದ್ದರೆ ಮಾತ್ರ ಟೆಂಡರ್ ಕರೆಯಬೇಕು. ಗುತ್ತಿಗೆದಾರರು ಬಿಲ್ ಸಲ್ಲಿಸಿದ 60 ದಿನಗಳಲ್ಲಿ ಹಣ ಪಾವತಿಸಬೇಕು. ಇಲ್ಲದಿದ್ದರೆ ಅದರ ಬಡ್ಡಿ ಹಾಕಿ ಕೊಡಬೇಕು ಎಂದು ಒತ್ತಾಯಿಸಿದರು.
ಉತ್ತರ ಕರ್ನಾಟಕದ ಗುತ್ತಿಗೆದಾರರ ಸಮಸ್ಯೆಗಳ ಬಗ್ಗೆ ಚರ್ಚಿಸಲು ಲೋಕೋಪಯೋಗಿ ಇಲಾಖೆ ಸಚಿವರ ನೇತೃತ್ವದಲ್ಲಿ ಇಲಾಖೆಯ ಉತ್ತರ ವಲಯದ ಮುಖ್ಯ ಇಂಜಿನಿಯರ್ ಹಾಗೂ ಗುತ್ತಿಗೆದಾರರ ಸಭೆ ಜರುಗಿಸಿ ಚರ್ಚಿಸಬೇಕು. ನಿಗದಿತ ಸಮಯ ಹೊರತಾಗಿಯೂ ಗುತ್ತಿಗೆದಾರರು ಕಾಮಗಾರಿಗೆ ಬೇಕಾದ ಸಾಮಗ್ರಿಗಳನ್ನು ಸಾಗಿಸಲು ಟಿಪ್ಪರ್‌ಗಳ ಸಂಚಾರಕ್ಕೆ ಅನುಮತಿ ನೀಡಬೇಕು. ಕೆಐಆರ್‌ಡಿಎಲ್ ಹಾಗೂ ನಿರ್ಮಿತಿ ಕೇಂದ್ರಗಳೂ ಗುತ್ತಿಗೆದಾರರಂತೆ ಟೆಂಡರ್‌ಗಳಲ್ಲಿ ಭಾಗವಹಿಸಿ ಟೆಂಡರ್ ಪಡೆಯಬೇಕು. 2 ಕೋಟಿ ರೂ.ಗಿಂತ ಹೆಚ್ಚಿನ ಕಾಮಗಾರಿಗೆ 2 ವರ್ಷ ಮತ್ತು 2 ಕೋಟಿ ರೂ. ಒಳಗಿನ ಕಾಮಗಾರಿಗೆ 1 ವರ್ಷ ನಿರ್ವಹಣೆಯ ಸಮಯ ನಿಗದಿಪಡಿಸಬೇಕು. ಪ್ರಥಮ ದರ್ಜೆ ಲೈಸೆನ್ಸ್ ನವೀಕರಿಸಲು 75 ಲಕ್ಷ ವಹಿವಾಟು ಹಾಗೂ 25 ಲಕ್ಷದ ಕಾಮಗಾರಿ ಮಾಡಬೇಕು. ಇದನ್ನು ಬದಲಿಸಿ ಯಾವುದಾದರೊಂದು ಇದ್ದರೂ ಲೈಸೆನ್ಸ್ ನವೀಕರಿಸಬೇಕು. ಪ್ಯಾಕೇಜ್ ಟೆಂಡರ್ ಮಾಡುವುದನ್ನು ನಿಲ್ಲಿಸಬೇಕು. ಕೆಲ ಇಲಾಖೆಗಳಲ್ಲಿ ಅಧಿಕಾರಿಗಳು ಹಲವು ವರ್ಷಗಳಿಂದ ಇದ್ದು, ಭ್ರಷ್ಟಾಚಾರ ನಡೆಯುತ್ತಿದೆ. ಅಂಥವರಿಗೆ ಕಾಲಾವಧಿ ನಿಗದಿಪಡಿಸಿ ವರ್ಗಾವಣೆ ಮಾಡಬೇಕು ಎಂದರು.
ಬಸವರಾಜ ಹಿರೇಮಠ, ಅಸಾಕ್ ಬೆಟಗೇರಿ, ವಿ.ಎಸ್. ಪಾಟೀಲ, ಇತರರು ಸುದ್ದಿಗೋಷ್ಠಿಯಲ್ಲಿದ್ದರು.