

ಅರಸೀಕೆರೆ: ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಕೊಬ್ಬರಿ ದಾಸ್ತಾನು ಮಾರಾಟ ಮಾಡಿರುವ ರೈತರ ಖಾತೆಗೆ ರಾಜ್ಯ ಸರ್ಕಾರ ತಕ್ಷಣವೇ ಪ್ರೋತ್ಸಾಹ ಧನ ಪಾವತಿಸಬೇಕು ಎಂದು ಒತ್ತಾಯಿಸಿ ರೈತ ಸಂಘದ ಮುಖಂಡರು ನಗರದ ಎಪಿಎಂಸಿ ಕಚೇರಿ ಬಳಿ ಸೋಮವಾರ ಧರಣಿ ನಡೆಸಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ದಯಾನಂದ ಮಾತನಾಡಿ, ಕೊಬ್ಬರಿ ಮಾರಾಟ ಮಾಡಿ ಹಲವು ತಿಂಗಳು ಕಳೆದಿದ್ದು, ರಾಜ್ಯ ಸರ್ಕಾರ ರೈತರ ಖಾತೆಗೆ ಹೆಚ್ಚುವರಿಯಾಗಿ ಒಂದೂವರೆ ಸಾವಿರ ರೂ. ನಗದು ಪಾವತಿಸಿಲ್ಲ. ಇದರಿಂದಾಗಿ ಅನ್ನದಾತರು ತೀವ್ರ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ವಾಸ್ತವ ಮನಗಂಡು ನೆರವಿಗೆ ಧಾವಿಸಬೇಕು. ಇಲ್ಲದಿದ್ದಲ್ಲಿ ಹೋರಾಟ ಮತ್ತಷ್ಟು ತೀವ್ರಗೊಳಿಸುವುದಾಗಿ ಎಚ್ಚರಿಸಿದರು.
ಮಹಿಳಾ ಘಟಕದ ಅಧ್ಯಕ್ಷೆ ನಾಗವೇಣಿ ಮಾತನಾಡಿ, ರಾಜಕಾರಣಿಗಳು ರೈತರ ಸಮಸ್ಯೆಗಳನ್ನು ಆಲಿಸುವ ಬದಲು ಪಾದಯಾತ್ರೆಗಳಲ್ಲಿ ತೊಡಗಿರುವುದು ದುರದೃಷ್ಟಕರ ಸಂಗತಿಯಾಗಿದೆ ಎಂದು ಕಿಡಿಕಾರಿದರು.
ಬಳಿಕ ಗ್ರೇಡ್ 2 ತಹಸಿಲ್ದಾರ್ ಪಾಲಾಕ್ಷ, ಎಪಿಎಂಸಿ ಕಾರ್ಯದರ್ಶಿ ಸಿ.ಎಲ್.ಸಿದ್ದರಂಗಸ್ವಾಮಿ ಅವರಿಗೆ ರೈತ ಮುಖಂಡರು ಮನವಿ ಪತ್ರ ಸಲ್ಲಿಸಿದರು. ಮುಖಂಡರಾದ ವಿನುತಾ, ಜಯಶೀಲ, ತೊಳಲತೊರೆ ಗ್ರಾಮ ಪಂಚಾಯಿತಿ ಸದಸ್ಯ ವೀರಣ್ಣ, ಬೆಳಗುಂಬ ಗ್ರಾಮ ಪಂಚಾಯಿತಿ ಸದಸ್ಯ ಚಂದ್ರಶೇಖರ್, ಕೊಟ್ರೇಶ್, ಲಿಂಗರಾಜು, ಶಿವಕುಮಾರ್, ಮಂಜುನಾಥ್, ಸಂತೋಷ್ ಮತ್ತಿತರರಿದ್ದರು.