

ಶಿರಸಿ: ಮಲೆನಾಡಿನ ಕ್ಷೇತ್ರವಾದ ಶಿರಸಿ ಸಿದ್ದಾಪುರಕ್ಕೆ ನೂರಕ್ಕೂ ಅಧಿಕ ಕಡೆ ಕಾಲು ಸಂಕ, ಸಣ್ಣ ಸೇತುವೆಗಳ ಬೇಡಿಕೆ ಇದೆ. ಈಗಾಗಲೇ 54 ಸಣ್ಣ ಸೇತುವೆ, ಕಾಲು ಸಂಕಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಹಂತ ಹಂತವಾಗಿ ಮಂಜೂರಾಗುತ್ತಿದೆ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.
ತಾಲೂಕಿನ ರಾಗಿಹೊಸಳ್ಳಿ-ಯಂತ್ರಗಾರ ರಸ್ತೆಯ ಬೆಣಗಾಂವ್ನಲ್ಲಿ 1.5 ಕೋಟಿ ರೂ.ನಲ್ಲಿ ನಿರ್ವಿುಸಲು ಉದ್ದೇಶಿಸಿರುವ ಸೇತುವೆಗೆ ಶನಿವಾರ ಗುದ್ದಲಿ ಪೂಜೆ ನೆರವೇರಿಸಿ ಮಾಧ್ಯಮದೊಂದಿಗೆ ಅವರು ಮಾತನಾಡಿದರು.
ಸಿದ್ದಾಪುರ ತಾಲೂಕಿನಲ್ಲಿ 8 ಕಾಲು ಸಂಕವನ್ನು ಈಗಾಗಲೇ ನಿರ್ವಿುಸಿದ್ದೇವೆ. ಶಿರಸಿ ತಾಲೂಕಿನಲ್ಲಿ 6 ಕಾಲುಸಂಕ, ಸಣ್ಣ ಸೇತುವೆಗಳನ್ನು ಮಂಜೂರು ಮಾಡಿಸಿದ್ದೇನೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಸೇತುವೆಗಳ ನಿರ್ಮಾಣ ಮಾಡುವ ಮೂಲಕ ಮಲೆನಾಡಿನ ಜನತೆಯ ಬದುಕಿಗೆ ತೊಂದರೆ ಆಗದಂತೆ ನೋಡಿಕೊಳ್ಳಲಾಗುವುದು ಎಂದರು.
ಸಿದ್ದಾಪುರ ತಾಲೂಕಿನ ಹಲವು ಸಣ್ಣ ಸೇತುವೆಗಳನ್ನು, ಕಾಲು ಸಂಕಗಳನ್ನು ಮಳೆಗಾಲದ ಪೂರ್ವದಲ್ಲಿಯೇ ಕಾಮಗಾರಿ ಪೂರ್ಣಗೊಳಿಸಿದ್ದೇವೆ. ಮಳೆಗಾಲದ ಆರಂಭವಾಗಿದ್ದ ಕಾರಣ ಕೆಲವೊಂದು ಸೇತುವೆಗಳ ಉದ್ಘಾಟನೆ ಇನ್ನೂ ಮಾಡಲಾಗಿಲ್ಲ. ಕ್ಷೇತ್ರದಲ್ಲಿ ಇನ್ನೂ ಹಲವೆಡೆ ಸೇತುವೆ, ಕಾಲು ಸಂಕಕ್ಕೆ ಬೇಡಿಕೆ ಇದೆ. ಸ್ವಲ್ಪ ಮಳೆಗೂ ಇಲ್ಲಿಯ ಹಳ್ಳ ಕೊಳ್ಳಗಳು ತುಂಬಿ ಎರಡು ಊರುಗಳ ಸಂಪರ್ಕವೇ ಕಡಿದುಹೋಗುತ್ತವೆ. ಈ ಕುರಿತಂತೆ ಲೋಕೋಪಯೋಗಿ ಇಲಾಖೆ ಸಚಿವರೊಂದಿಗೆ ರ್ಚಚಿಸಿ ಶಾಲಾ ಮಕ್ಕಳಿಗೆ ಹೊಳೆ ದಾಟಲು ಸಮಸ್ಯೆ ಆಗುವ ಸ್ಥಳಗಳಲ್ಲಿ ಮತ್ತು ರೈತರಿಗೆ ಅಗತ್ಯ ಇರುವಲ್ಲಿ ಸೇತುವೆಗಳನ್ನು ತ್ವರಿತವಾಗಿ ಮಂಜೂರು ಮಾಡುವಂತೆ ವಿನಂತಿಸಿದ್ದೇನೆ ಎಂದರು.
ಹೆಗಡೆಕಟ್ಟಾ ವಡ್ಡಿ ರಸ್ತೆಗೂ, ಶಿರಸಿ ಕುಮಟಾ ರಸ್ತೆಗೂ ಸಂಪರ್ಕ ಕಲ್ಪಿಸುವ ಈ ಮಾರ್ಗದಲ್ಲಿ ಬೆಣಗಾಂವ್ನಲ್ಲಿ ಸೇತುವೆ ನಿರ್ವಿುಸಿಕೊಡುವಂತೆ ಇಲ್ಲಿಯ ಜನತೆ ಬಹು ವರ್ಷಗಳಿಂದ ಬೇಡಿಕೆ ಸಲ್ಲಿಸಿದ್ದರು. ಇದರಿಂದಾಗಿ ಈ ಭಾಗದ ಜನತೆಗೆ ಕುಮಟಾ, ಘಟ್ಟದ ಕೆಳಗಿನ ಭಾಗವನ್ನು ಸಂರ್ಪಸಲು ಸನಿಹವಾಗುತ್ತಿದೆ. ಅಲ್ಲದೇ ಈ ಮಾರ್ಗದಲ್ಲಿ ಇನ್ನೊಂದು ಸೇತುವೆ ನಿರ್ವಣವಾಗಬೇಕಾದ ಅಗತ್ಯತೆ ಇದ್ದು, ಮುಂದಿನ ದಿನಗಳಲ್ಲಿ ಈ ಸೇತುವೆಯನ್ನೂ ಮಂಜೂರು ಮಾಡಿಸಿ ರಸ್ತೆ ಸಂಚಾರ ಸುಗಮಗೊಳಿಸಲಾಗುವುದು ಎಂದು ಶಾಸಕ ಭೀಮಣ್ಣ ಇದೇ ವೇಳೆ ಸ್ಥಳೀಯರಿಗೆ ಭರವಸೆ ನೀಡಿದರು.
ಇದಕ್ಕೂ ಮುನ್ನ ಶಿವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬರಸಗುಣಿ ಗ್ರಾಮಕ್ಕೆ 22 ಲಕ್ಷ ರೂ. ಮೌಲ್ಯದ ಕಾಲು ಸಂಕ ನಿರ್ವಣಕ್ಕೆ ಶಾಸಕ ಭೀಮಣ್ಣ ನಾಯ್ಕ ಗುದ್ದಲಿಪೂಜೆ ನೆರವೇರಿಸಿದರು. ಈ ಹಿಂದೆ ಬೈಕ್ ದಾಟಬಹುದಾದ ಕೇವಲ 3 ಅಡಿ ಅಗಲದ ಕಾಲು ಸಂಕ ಇಲ್ಲಿತ್ತಾದರೂ ಕಾಲು ಸಂಕಕ್ಕೆ ತಡೆಗೋಡೆ ಇಲ್ಲದೇ ಸ್ಥಳಿಯರು ಸರ್ಕಸ್ ಮಾಡುವಂತಾಗಿತ್ತು. ಅಲ್ಲದೇ ಕಳೆದ ವರ್ಷ ಬೃಹತ್ ಮರವೊಂದು ಈ ಕಾಲು ಸಂಕದ ಮೇಲೆ ಬಿದ್ದ ಕಾರಣ ಇಲ್ಲಿಯ ಜನತೆಗೆ ಸಂಪರ್ಕ ಕಡಿತವಾಗುವ ಸ್ಥಿತಿ ಉಂಟಾಗಿತ್ತು.
ಈ ವೇಳೆ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಗದೀಶ ಗೌಡ, ಪ್ರಮುಖರಾದ ದೇವರಾಜ ಮರಾಠಿ, ಪ್ರವೀಣ ಪಾಟೀಲ ತೆಪ್ಪಾರ್,ಸ್ಥಳೀಯ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರಿದ್ದರು.