ಆದಿವಾಸಿಗಳಿಗೆ ಪೌಷ್ಟಿಕ ಆಹಾರ ಮಂಜೂರಿಗೆ ಆಗ್ರಹ

HUN-FEB-15-3(DSS MEMORENDUM)
ಹುಣಸೂರು ತಾಲೂಕು ಅಂಬೇಡ್ಕರ್ ನಗರದ ಆದಿವಾಸಿ ಕುಟುಂಬಗಳಿಗೆ ಪೌಷ್ಟಿಕ ಆಹಾರ ಪರ್ದಾರ್ಥ ನೀಡುವಂತೆ ಆಗ್ರಹಿಸಿ ಜಿಲ್ಲಾ ಸಮಗ್ರ ಗಿರಿಜನ ಅಭಿವೃದ್ಧಿ ಯೋಜನಾಧಿಕಾರಿ ಮಲ್ಲೇಶ್ ಅವರಿಗೆ ಮುಖಂಡರು ಮನವಿ ಸಲ್ಲಿಸಿದರು. ನಿಂಗರಾಜ ಮಲ್ಲಾಡಿ, ದಿವಾಕರ್, ದೇವೇಂದ್ರ, ಗಜೇಂದ್ರ, ವಸಂತ, ಮಣಿ, ಜಯಲಕ್ಷ್ಮೀ ಇದ್ದರು.
Published on

 ಹುಣಸೂರು: ತಾಲೂಕಿನ ಗೋವಿಂದನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಬೇಡ್ಕರ್‌ನಗರದ 30ಕ್ಕೂ ಹೆಚ್ಚು ಆದಿವಾಸಿ ಕುಟುಂಬಗಳಿಗೆ ಪೌಷ್ಟಿಕ ಆಹಾರ ಮಂಜೂರು ಮಾಡುವಂತೆ ದಲಿತ ಸಂಘರ್ಷ ಸಮಿತಿ ಸದಸ್ಯರು ಜಿಲ್ಲಾ ಸಮಗ್ರ ಗಿರಿಜನ ಅಭಿವೃದ್ಧಿ ಯೋಜನಾಧಿಕಾರಿ(ಐಟಿಡಿಪಿ)ಗೆ ಮನವಿ ಸಲ್ಲಿಸಿದರು.

ಶನಿವಾರ ಮೈಸೂರಿನ ಜಿಲ್ಲಾ ಸಮಗ್ರ ಗಿರಿಜನ ಅಭಿವೃದ್ಧಿ ಯೋಜನಾಧಿಕಾರಿ ಕಚೇರಿಗೆ ದಲಿತ ಸಂಘರ್ಷ ಸಮಿತಿ(ದಸಂಸ) ಜಿಲ್ಲಾ ಸಂಚಾಲಕ ನಿಂಗರಾಜ ಮಲ್ಲಾಡಿ ನೇತೃತ್ವದಲ್ಲಿ ಕಾಲನಿ ನಿವಾಸಿಗಳು ಐಟಿಡಿಪಿ ಅಧಿಕಾರಿ ಮಲ್ಲೇಶ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಈ ವೇಳೆ ಮಾತನಾಡಿದ ನಿಂಗರಾಜ ಮಲ್ಲಾಡಿ, ಚಿಕ್ಕಹುಣಸೂರು ಗ್ರಾಮದ ಸರ್ವೇ ನಂ.73/1 ಎ ರಲ್ಲಿ (ಬಾಚಳ್ಳಿ ರಸ್ತೆಯ ಅಂಬೇಡ್ಕರ್‌ನಗರ) ಸರ್ಕಾರಿ ಜಮೀನಿನಲ್ಲಿ ಕಳೆದ 40 ವರ್ಷಗಳಿಂದಲೂ ಗುಡಿಸಲು ಹಾಕಿಕೊಂಡು ವಾಸವಿದ್ದರು. ಇವರ ವಂಶಸ್ಥರು ಕುಟುಂಬ ಸಮೇತರಾಗಿ ಈ ಗ್ರಾಮದಲ್ಲಿಯೇ ವಾಸವಾಗಿದ್ದರು. ಸಮಿತಿಯ ನಿರಂತರ ಹೋರಾಟದಿಂದ ಈ ಆದಿವಾಸಿ ಜೇನುಕುರುಬ ಕುಟುಂಬಗಳಿಗೆ 94ಸಿ ಯೋಜನೆಯಡಿ ಮನೆಗಳ ಹಕ್ಕು ಪತ್ರ ಕೊಡಿಸಲಾಗಿದೆ. ಇವರು ಮೂಲತಃ ಆದಿವಾಸಿ ಜೇನುಕುರುಬ ಜನಾಂಗದವರಾಗಿದ್ದು, ಇವರ ವೃತ್ತಿ ಜೇನು ಬಸಿಯುವುದು, ಕಾಡಿನಲ್ಲಿ ಗಡ್ಡೆ-ಗೆಣಸು ತೆಗೆಯುವುದು, ಗಿಡಮೂಲಿಕೆ ನಾಟಿ ಔಷಧಯನ್ನು ತಯಾರಿಸುವುದಾಗಿದೆ. ಇವರಿಗೆ ಹಲವು ವರ್ಷಗಳಿಂದಲೂ ಹುಣಸೂರು ತಹಸೀಲ್ದಾರ್ ನೀಡಿರುವ ಜಾತಿ ಪ್ರಮಾಣ ಪತ್ರ, ಶಾಲಾ ದಾಖಲಾತಿ ಸಹ ಇದೆ. ಇವರ ಬಳಿ ರೇಷನ್ ಕಾರ್ಡ್, ಐಡಿ ಕಾರ್ಡ್, ಆಧಾರ್ ಕಾರ್ಡ್ ಮುಂತಾದ ದಾಖಲೆಗಳು ಸಹ ಇದೆ. ಆರೋಗ್ಯ ಇಲಾಖೆಗೆ ಸಂಬಂಧಪಟ್ಟ ದಾಖಲೆ, ಶಾಲಾ ದಾಖಲಾತಿಗಳಲ್ಲಿ ಜೇನುಕುರುಬ ಎಂದೇ ನಮೂದಾಗಿದೆ.

ಇಷ್ಟೆಲ್ಲ ದಾಖಲೆಗಳಿದ್ದರೂ ಇವರಿಗೆ ಸಮಗ್ರ ಗಿರಿಜನ ಅಭಿವೃದ್ಧಿ ಇಲಾಖೆ ವತಿಯಿಂದ ಪೌಷ್ಟಿಕ ಆಹಾರ ದೊರೆಯುವ ಬಗ್ಗೆ ಸರಿಯಾಗಿ ಮಾಹಿತಿ ಲಭ್ಯ ಇಲ್ಲದ ಕಾರಣ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಕಳೆದೊಂದು ವರ್ಷದಿಂದಲೂ ಸಭೆ ಸಮಾರಂಭಗಳಲ್ಲಿ ಪೌಷ್ಟಿಕ ಆಹಾರ ನೀಡುವಂತೆ ದಸಂಸ ಮನವಿ ಸಲ್ಲಿಸುತ್ತಿದೆ. ಆದರೆ ಕೆಲವರು ಗಿರಿಜನ ಮುಖಂಡರು ಎಂದು ಹೇಳಿಕೊಳ್ಳುವವರು ಇವರು ಆದಿವಾಸಿಗಳಲ್ಲ, ಜೇನುಕುರಬರಲ್ಲ ಎಂದು ಸುಳ್ಳು ಹೇಳುತ್ತಾ ಸರ್ಕಾರಿ ಸೌಲಭ್ಯಗಳು ಸಿಗದಂತೆ ಮಾಡುತ್ತಿದ್ದಾರೆ. ಇದನ್ನು ದಸಂಸ ತೀವ್ರವಾಗಿ ಖಂಡಿಸುತ್ತದೆ ಎಂದರು.

ಈ ಕುಟುಂಬಗಳು ಜೀವನ ಸಾಗಿಸಲು ಬಹಳ ಕಷ್ಟಪಡುತ್ತಿವೆೆ. ಆದ್ದರಿಂದ ತಾವು ಕೂಡಲೇ ಸ್ಥಳ ಪಪರಿಶೀಲನೆ ನಡೆಸಬೇಕು. ಇವರ ದಾಖಲೆಗಳನ್ನು ಪರಿಶೀಲಿಸಿ ನಿಜವಾದ ಆದಿವಾಸಿ ಜೇನುಕುರುಬ ಕುಟುಂಬಗಳಿಗೆ ಸಮಗ್ರ ಗಿರಿಜನ ಅಭಿವೃದ್ಧಿ ಇಲಾಖೆ ವತಿಯಿಂದ ಪೌಷ್ಟಿಕ ಆಹಾರ ಪದಾರ್ಥ ಮಂಜೂರು ಮಾಡಬೇಕು ಎಂದು ಮನವಿ ಮಾಡಿದರು.

ಮನವಿ ಸ್ವೀಕರಿಸಿ ಐಟಿಡಿಪಿ ಅಧಿಕಾರಿ ಮಲ್ಲೇಶ್ ಮಾತನಾಡಿ, ದಸಂಸದವರು ಹಲವು ಸಭೆ ಸಮಾರಂಭಗಳಲ್ಲಿ ಈ ವಿಷಯ ಚರ್ಚಿಸಿದ್ದಾರೆ. ದೂರುಗಳು ಸಹ ಬಂದಿವೆ. ಈ ಬಗ್ಗೆ ಪರಿಶೀಲಿಸಿ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಲಾಗುವುದು. ನಂತರ ಸ್ಥಳ ಪರಿಶೀಲಿಸಿ ನೈಜತೆ ತಿಳಿದು ಆದಿವಾಸಿ ಜೇನುಕುರುಬ ಕುಟುಂಬಗಳಿಗೆ ನಮ್ಮ ಇಲಾಖೆಯಿಂದ ಪೌಷ್ಟಿಕ ಆಹಾರ ಮಂಜೂರು ಮಾಡಲಾಗುವುದು ಎಂದು ಭರವಸೆ ನೀಡಿದರು.

ದ.ಸಂ.ಸ ಜಿಲ್ಲಾ ಸಂಘಟನಾ ಸಂಚಾಲಕರಾದ ಎಚ್.ಬಿ ದಿವಾಕರ್, ದೇವೇಂದ್ರ ಕುಳುವಾಡಿ, ಕಿರಿಜಾಜಿ ಗಜೇಂದ್ರ, ಆದಿವಾಸಿ ಮಹಿಳೆಯರಾದ ಅಂಬೇಡ್ಕರ್ ನಗರದ ವಸಂತಾ, ಕಣ್ಣಮ್ಮ, ಮಂಜುಳಾ, ದೇವಿ, ಮಂಗಳಾ, ಮಣಿ, ಜಯಲಕ್ಷ್ಮೀ, ಗೀತಾ, ಗೋಪಾಲ, ಸುರೇಶ ಮುಂತಾದವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net