

ಹುಬ್ಬಳ್ಳಿ : ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಕೊಳಚೆ ಪ್ರದೇಶಗಳಲ್ಲಿ ಮನೆಗಳ ಹಕ್ಕುಪತ್ರಗಳನ್ನು ವಿತರಿಸುವ ಹಾಗೂ ಚಾಮುಂಡೇಶ್ವರಿ ನಗರದಲ್ಲಿ ಸ್ಥಗಿತಗೊಂಡಿರುವ ಜಿ + 3 ಮಾದರಿಯ ಮನೆಗಳ ನಿರ್ಮಾಣ ಕಾಮಗಾರಿ ಪ್ರಾರಂಭಿಸುವಂತೆ ಶಾಸಕ ಮಹೇಶ ಟೆಂಗಿನಕಾಯಿ ಅವರು ಸರ್ಕಾರವನ್ನು ಆಗ್ರಹಿಸಿದ್ದಾರೆ.
ವಸತಿ ಸಚಿವ ಜಮೀರ ಅಹ್ಮದ್ಖಾನ್ ಹಾಗೂ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ್ರ ಪ್ರಸಾದ ಅಬ್ಬಯ್ಯ ಅವರನ್ನು ಬೆಂಗಳೂರಿನಲ್ಲಿ ಶುಕ್ರವಾರದಂದು ಭೇಟಿ ಮಾಡಿದ ಶಾಸಕ ಮಹೇಶ ಟೆಂಗಿನಕಾಯಿ, ಈ ಕುರಿತು ಮನವಿ ಮಾಡಿದ್ದಾರೆ.
ಚಾಮುಂಡೇಶ್ವರಿ ನಗರದಲ್ಲಿ ಫಲಾನುಭವಿಗಳು ಈಗಾಗಲೇ 50 ಸಾವಿರ ರೂ. ಗಳನ್ನು ಪಾವತಿಸಿ, ಬಾಡಿಗೆ ಮನೆಯಲ್ಲಿ ವಾಸವಿದ್ದಾರೆ. ಶೀಘ್ರ ಮನೆಗಳು ಸಿಗುತ್ತವೆ ಎಂಬ ಭರವಸೆಯಲ್ಲಿದ್ದಾರೆ. ಬಾಡಿಗೆ ನೀಡುವುದು ಕೂಡ ಅವರಿಗೆ ಕಷ್ಟದ ಕೆಲಸವಾಗಿದೆ. ಆದ್ದರಿಂದ ಕೆಲಸವನ್ನು ಬೇಗನೆ ಪ್ರಾರಂಭ ಮಾಡಬೇಕೆಂದು ಸಚಿವರಿಗೆ ಶಾಸಕ ಟೆಂಗಿನಕಾಯಿ ಒತ್ತಾಯಿಸಿದರು.
650 ಮನೆಗಳ ಕಟ್ಟಡ ಕಾಮಗಾರಿಯನ್ನು ಶೀಘ್ರದಲ್ಲಿಯೇ ಪ್ರಾರಂಭಿಸಿ, ನಿಗದಿತ ಅವಧಿಯೊಳಗಾಗಿ ಗುಣಮಟ್ಟದ ಕಾಮಗಾರ್ನಿ ಪೂರ್ಣಗೊಳಿಸಿ, ಫಲಾನುಭವಿಗಳಿಗೆ ಮನೆಗಳನ್ನು ಹಸ್ತಾಂತರಿಸಲು ಆಗ್ರಹಿಸಿದರು.
ಮನವಿಗೆ ಸ್ಪಂಧಿಸಿ ಮಾತನಾಡಿದ ವಸತಿ ಸಚಿವ ಜಮೀರ ಅಹ್ಮದ್ ಖಾನ್, ಹುಬ್ಬಳ್ಳಿಗೆ ಭೇಟಿ ನೀಡಿ, ಹು-ಧಾ ಸೆಂಟ್ರಲ್ ಕ್ಷೇತ್ರದಲ್ಲಿ ಪರಿಶೀಲಿಸುತ್ತೇನೆ ಎಂದು ಹೇಳಿದರು.