ಬಳ್ಳಾರಿ : ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆಯ (ನಿಮ್ಹಾನ್ಸ್ ) ಶಾಖೆಯನ್ನು ಬಳ್ಳಾರಿಯಲ್ಲಿ ಆರಂಭಿಸಬೇಕು ಎಂದು ರಾಜ್ಯಸಭಾ ಸದಸ್ಯ ಸಯ್ಯದ್ ನಾಸಿರ್ ಹುಸೇನ್ ಆಗ್ರಹಿಸಿದ್ದಾರೆ.
ದೆಹಲಿಯ ರಾಜ್ಯಸಭೆಯಲ್ಲಿ ಗಮನಸೆಳೆಯುವ ಸೂಚನೆಯಡಿ ವಿಷಯ ಪ್ರಸ್ತಾಪಿಸಿದ ಅವರು, ಬೆಂಗಳೂರಿನ ನಿಮ್ಹಾನ್ಸ್‌ನಲ್ಲಿ ರೋಗಿಗಳ ಸಂಖ್ಯೆ ಭಾರಿ ಜಾಸ್ತಿ ಆಗಿದೆ. ಉತ್ತರ ಕರ್ನಾಟಕ ಜನರು ಬೆಂಗಳೂರಿನ ನಿಮ್ಹಾನ್ಸ್‌ಗೆ ಬರಲು 600 ಕಿ.ಮೀ. ಪ್ರಯಾಣ ಮಾಡಬೇಕಿದೆ. ಬಳ್ಳಾರಿಯ ಉತ್ತರ ಕರ್ನಾಟಕದ ಕೇಂದ್ರ ಭಾಗದಲ್ಲಿದೆ. ಜಿಲ್ಲೆಯಲ್ಲಿ ಶಾಖೆಯನ್ನು ಆರಂಭಿಸಿದರೆ ಈ ಭಾಗದ ಜನರಿಗೆ ಬಾರಿ ಅನುಕೂಲ ಆಗಲಿದೆ. ಜತೆಗೆ, ಆಂಧ್ರ ಪ್ರದೇಶ, ತೆಲಂಗಾಣ ಹಾಗೂ ಮಹಾರಾಷ್ಟ್ರದ ಜನರು ಪ್ರಯೋಜನ ಪಡೆಯಲಿದ್ದಾರೆ. ಗಣಿಗಾರಿಕಾರಿಕೆಯಿಂದಾಗಿ ಜಿಲ್ಲೆ ಹಲವು ಸವಾಲುಗಳನ್ನು ಎದುರಿಸುತ್ತಿದೆ. ಮಾನಸಿಕ ಸಮಸ್ಯೆಯಿಂದ ಅನೇಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಿಮ್ಹಾನ್ಸ್ ಶಾಖೆ ಆರಂಭಿಸುವಂತೆ ಕೇಂದ್ರ ಆರೋಗ್ಯ ಸಚಿವರಿಗೆ ಈಗಾಗಲೇ ಮನವಿ ಸಲ್ಲಿಸಲಾಗಿದೆ. ಶಾಖೆ ಆರಂಭಿಸಲು ಅಗತ್ಯವಿರುವ ಭೂಮಿಯಿದೆ. ಉತ್ತಮ ಸಂಪರ್ಕ ಜಾಲವೂಯಿದೆ. ಬಳ್ಳಾರಿಯಲ್ಲಿ ಶಾಖೆ ಆರಂಭಿಸಿದರೆ ನಿಮ್ಹಾನ್ಸ್ ನ ಒತ್ತಡ ಕಡಿಮೆ ಆಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.