

ಬೆಂಗಳೂರು: ಐದು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಒಕ್ಕಲಿಗ ಜನಾಂಗವು ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸಲು ‘ಒಕ್ಕಲಿಗ ಅಭಿವೃದ್ಧಿ ನಿಗಮ’ ಸ್ಥಾಪಿಸಬೇಕೆಂದು ಒತ್ತಾಯದ ಸಮಿತಿಯು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಕಂದಾಯ ಸಚಿವ ಆರ್.ಅಶೋಕ್ ಅವರನ್ನು ಮಂಗಳವಾರ ಭೇಟಿ ಮಾಡಿ ಮನವಿ ಸಲ್ಲಿಸಿದೆ.
ರಾಜ್ಯದ ಜನಸಂಖ್ಯೆಯಲ್ಲಿ ಶೇ.16ರಷ್ಟು ಇರುವ ಒಕ್ಕಲಿಗ ಜನಾಂಗವು ಸರ್ಕಾರದ ಬೊಕ್ಕಸಕ್ಕೆ ಶೇ. 65ಕ್ಕೂ ಹೆಚ್ಚಿನ ಆದಾಯವನ್ನು ತೆರಿಗೆ ರೂಪದಲ್ಲಿ ತುಂಬುತ್ತಿದ್ದಾರೆ. ಆದರೆ, ಈ ಜನಾಂಗದವರು ಅನೇಕ ಕಷ್ಟಗಳನ್ನು ಎದುರಿಸುತ್ತಿದ್ದಾರೆ. ಹಾಗಾಗಿ, ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಒಕ್ಕಲಿಗ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಬೇಕು ಎಂದು ಸಮಿತಿಯ ಸದಸ್ಯ ತಲಕಾಡು ಚಿಕ್ಕರಂಗೇಗೌಡ ಮನವಿ ಮಾಡಿದರು.
ರಾಜ್ಯ ಹಾಗೂ ದೇಶ ಸೇವೆ ಸಲ್ಲಿಸುತ್ತಿರುವ ಒಕ್ಕಲಿಗ ಜನಾಂಗದ ಹೆಚ್ಚಿನ ಸಂಖ್ಯೆಯ ಜನರು ಇಂದಿಗೂ ಕೃಷಿ ನಂಬಿಕೊಂಡು ಗ್ರಾಮೀಣ ಪ್ರದೇಶಗಳಲ್ಲಿ ಜೀವನ ನಡೆಸುತ್ತಿದ್ದಾರೆ. ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ಬೆಳೆದ ಬೆಳೆಗಳು ಸರಿಯಾಗಿ ಬೆಲೆ ಸಿಗದೆ ಆರ್ಥಿಕ ನಿರ್ವಹಣೆಗೆ ಪರದಾಡುತ್ತಿದ್ದಾರೆ. ಬೆಳೆಗೆ ಸಾಲ ಮಾಡಿ ಬಡ್ಡಿ ಹಾಗೂ ಸಾಲ ಕಟ್ಟಲಾಗದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆದ್ದರಿಂದ, ನಿಗಮ ಸ್ಥಾಪಿಸಿದರೆ ಈ ಜನಾಂಗ ಅಭಿವೃದ್ಧಿಯಾಗಲಿದೆ ಎಂದು ಮತ್ತೊಬ್ಬ ಸದಸ್ಯ ಎ.ಎಚ್.ಆನಂದ್ ತಿಳಿಸಿದರು.
ರಾಜ್ಯ ಹಾಗೂ ದೇಶದ ಸೇವೆಯಲ್ಲಿ ಒಕ್ಕಲಿಗ ಜನಾಂಗದ ರಾಜಕಾರಣಿಗಳು ನಿರತರಾಗಿದ್ದಾರೆ. ನಾಡಿ ಸಾಂಸ್ಕೃತಿಕ ಕ್ಷೇತ್ರಗಳಾದ ನಾಟಕ, ಜಾನಪದ, ಚಿತ್ರಕಲೆ, ಸಂಗೀತ, ಸಾಹಿತ್ಯ, ಚಲನಚಿತ್ರ, ಶಿಕ್ಷಣ, ವೈದ್ಯಕೀಯ, ಕೃಷಿ, ಪತ್ರಿಕಾರಂಗ, ಸಮಾಜಸೇವೆ, ಕನ್ನಡಪರ ಹೋರಾಟ, ಸಾಮಾಜಿಕ ಹೋರಾಟ ಸೇರಿ ಮುಂತಾದ ಕ್ಷೇತ್ರಗಳಲ್ಲಿ ಅನನ್ಯ ಸೇವೆ ಸಲ್ಲಿಸುತ್ತಿದ್ದಾರೆ. ಹಾಗಾಗಿ, ಈ ಜನಾಂಗಕ್ಕೆ ಸಾಮಾಜಿಕ ನ್ಯಾಯ ಸಿಗಲು ಆದಷ್ಟು ಬೇಗ ನಿಗಮ ಸ್ಥಾಪಿಸಬೇಕು ಎಂದು ಸಮಿತಿ ಸದಸ್ಯ ಎನ್. ವೇಣುಗೋಪಾಲ್ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.