

ವಿಜಯಪುರ:ಯುಕೆಪಿ ಮೂರನೇ ಹಂತದ ಯೋಜನೆಯಲ್ಲಿ ಫಲವತ್ತಾದ ಭೂಮಿ ಕಳೆದುಕೊಳ್ಳುತ್ತಿರುವ ನೊಂದ ಸಂತ್ರಸ್ತರಿಗೆ ಹೆಚ್ಚಿನ ಪರಿಹಾರ ಒದಗಿಸುವಂತೆ ಒತ್ತಾಯಿಸಿ ಅಖಂಡ ಕರ್ನಾಟಕ ರೈತ ಸಂದ ಪದಾಧಿಕಾರಿಗಳು ಬುಧವಾರ ಜಿಲ್ಲಾಧಿಕಾರಿ ಕಚೇರಿ ಮೂಲಕ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಸಂದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ನ್ಯಾ. ಬ್ರಜೇಶಕುಮಾರ ನೇತೃತ್ವದ 2ನೇ ನ್ಯಾಯಾಧೀಕರಣದ ತೀರ್ಪಿನಂತೆ ಆಲಮಟ್ಟಿ ಜಲಾಶಯದ ನೀರಿನ ಮಟ್ಟವನ್ನು 524.256 ಮೀ.ಗೆ ಎತ್ತರಿಸಿ ನೀರು ನಿಲ್ಲಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಜಲಾಶಯದಲ್ಲಿ 524.256ಕ್ಕೆ ನೀರು ನಿಲ್ಲಿಸುವುದರಿಂದ ಮುಳುಗಡೆಯಾಗುವ ಜಮೀನುಗಳಿಗೆ ಪ್ರತಿ ಎಕರೆಗೆ ಖುಷ್ಕಿ ಜಮೀನುಗಳಿಗೆ 30 ಲಕ್ಷ ರೂ. ಹಾಗೂ ನೀರಾವರಿ ಭೂಮಿಗೆ ಪ್ರತಿ ಎಕರೆಗೆ 40 ಲಕ್ಷ ರೂಗಳಂತೆ ಬೆಲೆ ನಿಗದಿಮಾಡಿದೆ. ಸರ್ಕಾರದ ಈ ನಿರ್ಧಾರದಿಂದ ಭೂಮಿ ಕಳೆದುಕೊಂಡು ನಿರಾಶ್ರಿತರಾಗುವ ರೈತರಿಗೆ ಅನ್ಯಾಯ ಮಾಡುತ್ತಿದೆ ಎಂದು ದೂರಿದರು.
ಹಳ್ಳಿಗಳಲ್ಲಿ ಪ್ರತಿ ಎಕರೆ ಒಣ ಬೇಸಾಯದ ಜಮೀನಿಗೆ 40 ರಿಂದ 50 ಲಕ್ಷ ರೂ. ಹಾಗೂ ನೀರಾವರಿ ಜಮೀನುಗಳಿಗೆ 60&70 ಲಕ್ಷ ರೂ.ಗಳವರೆಗೆ ವ್ಯವಹಾರ ನಡೆದಿದೆ. ಆದರೆ, ಸರ್ಕಾರ ಬೆಲೆ ನಿಗದಿ ಮಾಡುವಾಗ ಗ್ರಾಮೀಣ ಪ್ರದೇಶದಲ್ಲಿ ಭೂಮಿಯ ಬೆಲೆ ಎಷ್ಟಿದೆ ಎಂದು ಅವಲೋಕನ ಮಾಡಿಲ್ಲ. ಅವಳಿ ಜಿಲ್ಲೆಯ ಫಲವತ್ತಾದ ಭೂಮಿಗಳಿವೆ. ಕೆಲವು ರಾಜಕೀಯ ರೈತರ ಅಭಿಪ್ರಾಯ ಪಡೆದು ರೈತರಿಗೆ ಮಂಕು ಬೂದಿ ಎರಚಿ ಸರ್ಕಾರ ಈಗ ನಿಗದಿ ಮಾಡಿರುವ ಬೆಲೆಗೆ ಒಪ್ಪುವಂತೆ ಮಾಡಿದೆ. ಯಾವುದೇ ಕಾರಣಕ್ಕೂ ಸರ್ಕಾರ ನಿಗದಿ ಮಾಡಿದ ಬೆಲೆಗೆ ನಿರಾಶ್ರಿತರು ಎಂದೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಸರ್ಕಾರ ಮತ್ತೊಮ್ಮೆ ಸಚಿವ ಸಂಪುಟ ಸಭೆ ನಡೆಸಿ ಹೆಚ್ಚಿನ ದರ ನಿಗದಿ ಕುರಿತು ನಿಜವಾದ ರೈತರನ್ನು ಸಭೆಗೆ ಆಹ್ವಾನಿಸಬೇಕೆಂದು ಆಗ್ರಹಿಸಿದರು.
ಹುಣಶ್ಯಾಳದ ಸಂಗನ ಬಸವ ಸ್ವಾಮೀಜಿ, ಬಾಲಪ್ಪಗೌಡ ಲಿಂಗದಳ್ಳಿ, ವಿಠಲ ಬಿರಾದಾರ, ಮಲ್ಲಿಕಾರ್ಜುನ ಬಟಗಿ, ಪಾಂಡು ಹ್ಯಾಟಿ, ಬಸವರಾಜ ಮಸರಕಲ್ಲ, ಗುರುರಾಜ ಪಡಶೆಟ್ಟಿ, ಲಾಲಸಾಬ ಹಳ್ಳೂರ, ಮಲಿಗೆಪ್ಪ ಸಾಸಲಗಿ, ಗುರಲಿಂಗಪ್ಪ ಪಡಸಲಗಿ, ರ್ಯಾವಪ್ಪಗೌಡ ಪುಲೇಶಿ, ಮಲ್ಲಪ್ಪ ಪಡಸಲಗಿ, ಗುರುಲಿಂಗಪ್ಪ ಪಡಸಲಗಿ ಮತ್ತಿತರರಿದ್ದರು.
ಯುಕೆಪಿ ಮೂರನೇ ಹಂತದ ಯೋಜನೆಯಲ್ಲಿ ಫಲವತ್ತಾದ ಭೂಮಿ ಕಳೆದುಕೊಳ್ಳುತ್ತಿರುವ ನೊಂದ ಸಂತ್ರಸ್ತರಿಗೆ ಹೆಚ್ಚಿನ ಪರಿಹಾರ ಒದಗಿಸುವಂತೆ ಒತ್ತಾಯಿಸಿ ವಿಜಯಪುರದಲ್ಲಿ ಅಖಂಡ ಕರ್ನಾಟಕ ರೈತ ಸಂದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಡಾ. ಆನಂದ ಕೆ. ಅವರಿಗೆ ಮನವಿ ಸಲ್ಲಿಸಿದರು. ಅರವಿಂದ ಕುಲಕರ್ಣಿ, ಸಂಗನ ಬಸವ ಸ್ವಾಮೀಜಿ, ಮಲ್ಲಿಕಾರ್ಜುನ ಬಟಗಿ ಮತ್ತಿತರರಿದ್ದಾರೆ.