ಮಾಸಾಶನ, ವಸತಿ, ಸ್ಮಶಾನ ಭೂಮಿಗೆ ಬೇಡಿಕೆ

ಚಿಕ್ಕಬಳ್ಳಾಪುರ ತಾಪಂ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಜನಸ್ಪಂದನ ಸಭೆಯಲ್ಲಿ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಉಪವಿಭಾಗಾಧಿಕಾರಿ ಡಿ.ಎಚ್.ಅಶ್ವಿನ್, ತಹಸೀಲ್ದಾರ್ ಅನೀಲ್ ಮತ್ತಿತರರು ಇದ್ದರು.
28CBPJANATHADARASHANA
ಚಿಕ್ಕಬಳ್ಳಾಪುರ ತಾಪಂ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಜನಸ್ಪಂದನ ಸಭೆಯಲ್ಲಿ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಉಪವಿಭಾಗಾಧಿಕಾರಿ ಡಿ.ಎಚ್.ಅಶ್ವಿನ್, ತಹಸೀಲ್ದಾರ್ ಅನೀಲ್ ಮತ್ತಿತರರು ಇದ್ದರು.
Published on

ಜನಸ್ಪಂದನ ಸಭೆಯಲ್ಲಿ 52 ಅರ್ಜಿ ಸ್ವೀಕಾರ- ಕಾಲಮಿತಿಯೊಳಗೆ ಇತ್ಯರ್ಥಪಡಿಸಲು ಜಿಲ್ಲಾಡಳಿತ ಸೂಚನೆ

ವಿಜಯವಾಣಿ ಸುದ್ದಿಜಾಲ ಚಿಕ್ಕಬಳ್ಳಾಪುರ
ಅಂಗವಿಕಲ ಮಾಸಾಶನಕ್ಕೆ ಅಂಧರ ಮನವಿ, ಸ್ಮಶಾನಕ್ಕಾಗಿ ಅಗತ್ಯ ಭೂಮಿ, ನಿವೇಶನ ಮತ್ತು ವಸತಿ ಸೌಲಭ್ಯ ಮಂಜೂರು, ಅಕ್ರಮ ಒತ್ತುವರಿ ತೆರವು, ರಸ್ತೆ ನಿರ್ಮಾಣ, ಜಮೀನಿನ ಸರ್ವೇ…. ಇವು ತಾಲೂಕು ಮಟ್ಟದ ಜನಸ್ಪಂದನದಲ್ಲಿ ಸಲ್ಲಿಕೆಯಾದ ಪ್ರಮುಖ ಮನವಿಗಳು.

ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜನಸ್ಪಂದನ ಸಭೆಯಲ್ಲಿ ಒಟ್ಟು 52 ಅರ್ಜಿಗಳನ್ನು ಸ್ವೀಕರಿಸಲಾಯಿತು. ಈ ಪೈಕಿ ಕಂದಾಯ ಇಲಾಖೆ 40, ಗ್ರಾಮೀಣಾಭಿವದ್ಧಿ ಇಲಾಖೆ 10, ಬೆಸ್ಕಾಂ ಮತ್ತು ಜಿಲ್ಲಾ ವಾರ್ಗದರ್ಶಿ ಬ್ಯಾಂಕ್‌ಗೆ ಸಂಬಂಧಿಸಿದ ತಲಾ 1 ಅರ್ಜಿ ಸೇರಿದೆ. ನಿಯಮಾನುಸಾರ ನಿಗದಿತ ಕಾಲಮಿತಿಯೊಳಗೆ ಕಡ್ಡಾಯವಾಗಿ ಇತ್ಯರ್ಥಪಡಿಸಿ, ವರದಿ ನೀಡಲು ಸಂಬಂಧಪಟ್ಟ ಇಲಾಖೆಗಳಿಗೆ ಜಿಲ್ಲಾಡಳಿತ ಸೂಚಿಸಿದೆ.


ಸ್ಥಳದಲ್ಲಿ ವಿಶೇಷ ಪ್ರಕರಣ ಇತ್ಯರ್ಥ
ಅಂಧ ಅಂಗವಿಕಲರು ಮಾಸಾಶನಕ್ಕೆ ಸಲ್ಲಿಸಿದ ಅರ್ಜಿಯನ್ನು ಪರಿಶೀಲಿಸಿ, ಸ್ಥಳದಲ್ಲೇ ಇತ್ಯರ್ಥಪಡಿಸಲಾಯಿತು. ಉಳಿದಂತೆ ಸ್ವೀಕಾರಗೊಂಡ 51 ಅರ್ಜಿಗಳನ್ನು ಸಂಬಂಧಪಟ್ಟ ಇಲಾಖೆಗಳಿಗೆ ವರ್ಗಾಯಿಸಿ, ಕಾಲಮಿತಿಯೊಳಗೆ ಇತ್ಯರ್ಥಪಡಿಸಲಾಗುತ್ತದೆ ಎಂದು ಜಿಲ್ಲಾಡಳಿತ ತಿಳಿಸಿದೆ.

ಕಚೇರಿಗೆ ಜನರ ಅಲೆದಾಟ ತಪ್ಪಿಸಿ
ಸರ್ಕಾರಿ ಕಚೇರಿಗಳಿಗೆ ಜನರನ್ನು ಅಲೆದಾಡಿಸುವ ನಿರ್ಲಕ್ಷ್ಯ ಧೋರಣೆಯನ್ನು ಬಿಡಲು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅಧಿಕಾರಿಗಳಿಗೆ ಸೂಚಿಸಿದರು. ಜನಸ್ಪಂದನ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಕಡ್ಡಾಯವಾಗಿ ಪ್ರತಿಯೊಂದು ಕಚೇರಿಯಲ್ಲೂ ಅಹವಾಲು ಮತ್ತು ಸವಲತ್ತುಗಳ ಮನವಿ ಸಲ್ಲಿಕೆಯ ಜನರ ಅರ್ಜಿಗಳು ನಿಗದಿತ ಕಾಲಮಿತಿಯೊಳಗೆ ಬಗೆಹರಿಯಬೇಕು. ವಿಳಂಬ ಧೋರಣೆಯನ್ನು ಸಹಿಸುವುದಿಲ್ಲ. ದೂರುಗಳು ಬಂದಲ್ಲಿ ಸಂಬಂಧಪಟ್ಟವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕಾಗುತ್ತದೆ ಎಂದರು.

ರೈತರು ಕಷಿ ಚಟುವಟಿಕೆಯ ಒತ್ತಡದ ನಡುವೆ ತಾಲೂಕು ಕಚೇರಿ, ಕಷಿ, ತೋಟಗಾರಿಕೆ ಸೇರಿ ವಿವಿಧ ಇಲಾಖೆಗಳ ಕಚೇರಿಗೆ ಬರುತ್ತಾರೆ. ಅದರಲ್ಲೂ ಸೋಮವಾರದಂದು ಅಹವಾಲು ಸಲ್ಲಿಕೆ ಹೆಚ್ಚಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಅನಗತ್ಯ ರಜೆ ಹಾಕದೆ ಹಾಜರಿದ್ದು ಅವರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದರು.

ಆಯಾ ಇಲಾಖೆಗಳ ಹಂತದಲ್ಲಿಯೇ ಅರ್ಜಿಗಳು ತ್ವರಿತವಾಗಿ ವಿಲೇವಾರಿಯಾದಲ್ಲಿ ಸಾರ್ವಜನಿಕರು ಜನಸ್ಪಂದನ ಕಾರ್ಯಕ್ರಮಕ್ಕೆ ಬರಬೇಕಾದ ಅಗತ್ಯವೇ ಇರುವುದಿಲ್ಲ. ಅಲೆದಾಟವೂ ತಪ್ಪುತ್ತದೆ ಎಂದರು.

ಉಪವಿಭಾಗಾಧಿಕಾರಿ ಡಿ.ಎಚ್.ಅಶ್ವಿನ್, ಡಿವೈಎಸ್ಪಿ ಶಿವಕುವಾರ್, ತಹಸೀಲ್ದಾರ್ ಅನಿಲ್, ತಾಪಂ ಇಒ ಮಂಜುನಾಥ್ ಮತ್ತಿತರರು ಇದ್ದರು.


ಡಿಸಿಯಿಂದ ಸ್ವಚ್ಛತೆ ಪಾಠ
ಮಳೆಗಾಲದಲ್ಲಿ ಉತ್ತಮ ನೈರ್ಮಲ್ಯ ನಿರ್ವಹಣೆಗೆ ಜಿಲ್ಲಾಧಿಕಾರಿಗಳು ಸ್ಥಳೀಯ ಆಡಳಿತ ಸಂಸ್ಥೆಗಳಿಗೆ ಸೂಚಿಸಿದರು.
ಆಯಾ ವ್ಯಾಪ್ತಿಯಲ್ಲಿನ ಮೂಲಸೌಕರ್ಯಗಳ ಕೊರತೆ ಬಗ್ಗೆ ಸಕಾಲಕ್ಕೆ ಮೇಲಧಿಕಾರಿಗಳ ಗಮನಕ್ಕೆ ತರಬೇಕು. ಚರಂಡಿಗಳ ಸ್ವಚ್ಛತೆ ಹಾಗೂ ಪ್ಲಾಸ್ಟಿಕ್ ನಿಯಂತ್ರಣ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಆದ್ಯತೆ ನೀಡಬೇಕು. ವಾರದಲ್ಲಿ ಪ್ರತಿ ಶುಕ್ರವಾರ ಈಡಿಸ್ ಸೊಳ್ಳೆ ಉತ್ಪತ್ತಿ ತಾಣಗಳನ್ನು ನಾಶಪಡಿಸುವ ದಿನ ಆಚರಿಸಬೇಕು. ಸತತವಾಗಿ ಮಳೆ ಬರುತ್ತಿರುವುದರ ನಡುವೆ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗುತ್ತಿದ್ದು ಡೆಂಘೆ, ಚಿಕೂನ್‌ಗುನ್ಯಾ ಸೇರಿದಂತೆ ರೋಗಗಳ ಹರಡುವಿಕೆಯನ್ನು ನಿಯಂತ್ರಿಸಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net