

ತುಮಕೂರು : ಮಾರಣಾಂತಿಕ ಕರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ನಗರದಲ್ಲಿ ಸರ್ಜಿಕಲ್ ಮಾಸ್ಕ್ (ಮುಖಗವಸು)ಗಳಿಗೆ ಈಗ ಎಲ್ಲಿಲ್ಲದ ಡಿಮಾಂಡ್ ಶುರುವಾಗಿದೆ. 5 ರೂ.,ಗೆ ಸಿಗುತ್ತಿದ್ದ ಮಾಸ್ಕ್ ಈಗ 20 ರೂ., ಕೊಟ್ಟರೂ ಸಿಗುತ್ತಿಲ್ಲ. ಮೆಡಿಕಲ್ ಶಾಪ್‌ಗಳಲ್ಲೂ ಸರ್ಜಿಕಲ್ ಮಾಸ್ಕ್‌ಗಳು ಸಿಗುತ್ತಿಲ್ಲ. ಮಾಸ್ಕ್‌ಗಳ ಕೃತಕ ಅಭಾವದಿಂದ ಜನ ದುಪ್ಪಟ್ಟು ಹಣ ತೆತ್ತು ಮಾಸ್ಕ್ ಖರೀದಿಸುತ್ತಿರುವುದು ಕಂಡುಬಂದಿದೆ.
ನಗರದಲ್ಲಿ ಸ್ಮಾರ್ಟ್‌ಸಿಟಿ ಕಾಮಗಾರಿಗಳು ನಡೆಯುತ್ತಿರುವುದರಿಂದ ಧೂಳಿನಿಂದ ಜನ ಹೈರಾಣಾಗಿ ಹೋಗಿದ್ದಾರೆ. ಪ್ರತಿನಿತ್ಯ ಈ ಧೂಳಿನಮಜ್ಜನದಿಂದ ಸಾಕಷ್ಟು ಅಲರ್ಜಿಗಳಿಗೆ ಜನತೆ ತುತ್ತಾಗಿದ್ದು, ಅನಿವಾರ್ಯವಾಗಿ ಮಾಸ್ಕ್‌ಗಳಿಗೆ ಮೊರೆ ಹೋಗಿದ್ದಾರೆ. ಇನ್ನೂ ಕರೊನಾ ವೈರಸ್ ಭೀತಿ ಹೆಚ್ಚಾದ ಹಿನ್ನೆಲೆಯಲ್ಲಿ ಈಗ ಮಾಸ್ಕ್‌ಗಳಿಗೆ ಎಲ್ಲಿಲ್ಲದ ಬೇಡಿಕೆ ಬಂದಿದೆ. ಜನ ದುಪ್ಪಟ್ಟು ಹಣ ಕೊಟ್ಟು ಕೊಂಡುಕೊಳ್ಳಲು ಸಿದ್ಧರಿದ್ದರು ಬಹುತೇಕ ಮೆಡಿಕಲ್ ಶಾಪ್‌ಗಳಲ್ಲಿ ಸರ್ಜಿಕಲ್ ಮಾಸ್ಕ್‌ಗಳು ಸಿಗುತ್ತಿಲ್ಲ.
ಮಾಸ್ಕ್ ಸ್ಟಾಕ್ ಇಲ್ಲ !: ತುಮಕೂರು ನಗರದಲ್ಲಿ 250 ಔಷಧ ಅಂಗಡಿಗಳು ಸೇರಿ ಜಿಲ್ಲೆಯಲ್ಲಿ ಒಟ್ಟಾರೆ 800 ಮೆಡಿಕಲ್ ಶಾಪ್‌ಗಳಿವೆ. ಆದರೆ, ಈ ಮೆಡಿಕಲ್ ಶಾಪ್‌ಗಳಿಗೆ ಮಾಸ್ಕ್ ಪೂರೈಸುವ ಸಗಟು ವ್ಯಾಪಾರಿಗಳಾದ ತುಳಸಿಫಾರ್ಮಾ, ಕೃಷ್ಣ ಎಂಟರ್‌ಪ್ರೈಸಸ್, ನಾಗೇಂದ್ರ ಡ್ರಗ್ ಏಜೆನ್ಸಿಗಳಲ್ಲೂ ಸರ್ಜಿಕಲ್ ಮಾಸ್ಕ್ ಸ್ಟಾಕ್ ಇಲ್ಲವಾಗಿದೆ. 2.50- 3 ರೂ.,ಗೆ ಸಗಟು ದರದಲ್ಲಿ ಸಿಗುತ್ತಿದ್ದ ಮಾಸ್ಕ್‌ಗೆ ಈಗ 6 ರೂ., ಆಗಿದೆ. ಹಾಗಾಗಿ, ಮಾಸ್ಕ್ ಬೆಲೆ ದುಪ್ಪಟ್ಟು ಆಗಿದೆ ಎನ್ನಲಾಗಿದೆ.
ಈ ಮಧ್ಯೆ ಜಿಲ್ಲೆಯಲ್ಲಿ ಯಾವುದೇ ಕರೊನಾ ವೈರಸ್ ಶಂಕಿತ ಪ್ರಕರಣಗಳು ಪತ್ತೆಯಾಗಿಲ್ಲ. ಜನರು ಆತಂಕ ಪಡುವ ಅಗತ್ಯವಿಲ್ಲ. ಸಂಶಯಾತ್ಮಕ ಸೋಂಕು ಕಂಡು ಬಂದ ರೋಗಿಗಳಿಗೆ ಚಿಕಿತ್ಸೆ ನೀಡಲು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅಲ್ಲದೇ ವೈರಸ್‌ನ ಲಕ್ಷಣಗಳಿರುವವರು ಕೂಡಲೇ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆದುಕೊಳ್ಳುವಂತೆ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಟಿ.ಎ.ವೀರಭದ್ರಯ್ಯ ‘ವಿಜಯವಾಣಿ’ ತಿಳಿಸಿದರು.
ವೈದ್ಯರು, ಸಿಬ್ಬಂದಿ ರಜೆ ರದ್ದು: ಕರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಸರ್ಕಾರಿ ವೈದ್ಯರು ಹಾಗೂ ಸಿಬ್ಬಂದಿ, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಅನುಮತಿ ಪಡೆಯದೇ ರಜೆ ತೆಗೆದುಕೊಳ್ಳುವಂತಿಲ್ಲ. ವೈದ್ಯಕೀಯ ವಿದ್ಯಾರ್ಥಿಗಳಿಗೂ ಕರೊನಾ ಚಿಕಿತ್ಸೆ ಕುರಿತು ತರಬೇತಿ ನೀಡಿ. ಕೆಮ್ಮು, ನೆಗಡಿ ಇರುವವರು ಜಾತ್ರೆಗೆ ತೆರಳಬಾರದು ಎಂದು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ಕುಮಾರ್ ಕಟ್ಟುನಿಟ್ಟಿನ ಸೂಚನೆ ನೀಡಿದರು.
50 ಸಾವಿರ ಮಾಸ್ಕ್ ಇದೆ!: ಮೆಡಿಕಲ್ ಶಾಪ್‌ಗಳಲ್ಲಿ ಸರ್ಜಿಕಲ್ ಮಾಸ್ಕ್‌ಗಳ ಸಿಗುತ್ತಿಲ್ಲವೆಂಬ ಅರಿವು ಜಿಲ್ಲಾಡಳಿತಕ್ಕಿಲ್ಲ. ಆದರೆ, ಸರ್ಕಾರಿ ಮೆಡಿಕಲ್ ಸ್ಟೋರ್‌ನಲ್ಲಿ 20 ಸಾವಿರಕ್ಕು ಹೆಚ್ಚು ಮಾಸ್ಕ್‌ಗಳು ಹಾಗೂ ಜಿಲ್ಲಾ ಆಸ್ಪತ್ರೆಯಲ್ಲಿ 5 ಸಾವಿರ ಮಾಸ್ಕ್‌ಗಳಿವೆ. ಇನ್ನು ಖಾಸಗಿ ಮೆಡಿಕಲ್ ಶಾಪ್‌ಗಳಲ್ಲಿ 25 ಸಾವಿರ ಮಾಸ್ಕ್‌ಗಳಿದ್ದು ಒಟ್ಟು 50 ಸಾವಿರ ಮಾಸ್ಕ್‌ಗಳ ಸಂಗ್ರಹ ಇದೆ ಎಂಬ ಅಂಕಿ-ಅಂಶ ಇದೆ. ಮಾಸ್ಕ್‌ಗಳ ಡಿಮಾಂಡ್ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಒಂದುಕಡೆ ಮಾಸ್ಕ್‌ಗಳ ಕೃತಕ ಅಭಾವಸೃಷ್ಟಿಯಾಗುತ್ತಿದ್ದು ಜಿಲ್ಲಾಡಳಿತ ತೀವ್ರ ನಿಗಾವಹಿಸಬೇಕಿದೆ.
ಜಿಲ್ಲಾಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್ : ಕರೊನಾ ಭೀತಿ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಸ್ಪತ್ರೆಯಲ್ಲಿ 4 ಹಾಸಿಗೆಯ ಪ್ರತ್ಯೇಕ ವಾರ್ಡ್ ತೆರೆಯಲಾಗಿದೆ. ಅದಕ್ಕೆ ಸಿಬ್ಬಂದಿ ಸಹ ನೇಮಕ ಮಾಡಲಾಗಿದೆ. ದಿನದ 24 ಗಂಟೆ ಚಿಕಿತ್ಸೆ ನೀಡಲು ಜಿಲ್ಲಾಸ್ಪತ್ರೆ ಸನ್ನದ್ದವಾಗಿದ್ದು ಅಗತ್ಯ ಔಷಧ, ಮೂಲಸೌಕರ್ಯಗಳನ್ನು ಒದಗಿಸಿದ ವಿಶೇಷ ವಾರ್ಡ್ ಈಗಾಗಲೇ ಕಾರ್ಯಾರಂಭ ಮಾಡಿದೆ. ಕರೊನಾ ರೋಗಕ್ಕೆ ನಿರ್ದಿಷ್ಟ ಚಿಕಿತ್ಸೆ ಇನ್ನೂ ಕಂಡು ಹಿಡಿದಿಲ್ಲ. ಆದರೆ, ರೋಗ ಹರಡದಂತೆ ಮುನ್ನೆಚ್ಚರಿಕೆ ಕ್ರಮವಹಿಸಿ ತಡೆಗಟ್ಟಬಹುದಾಗಿದೆ.
ಜಿಲ್ಲೆಯ 13 ಜನರು ವಿದೇಶ ಪ್ರವಾಸ ಕೈಗೊಂಡು ಬಂದಿದ್ದು ಯಾರಿಗೂ ಕರೊನಾ ವೈರಸ್ ಸೋಂಕು ಕಂಡು ಬಂದಿರುವುದಿಲ್ಲ. ಮುಂಜಾಗ್ರತಾ ಕ್ರಮವಾಗಿ ಅವರಿಗೆ ಚಿಕಿತ್ಸೆ ನೀಡಲಾಗಿದೆ. ಸಾರ್ವಜನಿಕರು ಕೈಕಾಲುಗಳನ್ನು ಸೋಪು, ನೀರಿನಿಂದ ತೊಳೆದುಕೊಳ್ಳಬೇಕು. ಕಣ್ಣು, ಮೂಗು, ಬಾಯಿಯನ್ನು ಕೈನಿಂದ ಮುಟ್ಟಿಕೊಳ್ಳುವುದನ್ನು ಕಡಿಮೆ ಮಾಡಬೇಕು. ಕೆಮ್ಮು-ಶೀತ ಇರುವವರು ಮಾಸ್ಕ್‌ಗಳನ್ನು ಬಳಸಬೇಕು. ಇನ್ನೂ ಮಾಹಿತಿಗಾಗಿ ಜಿಲ್ಲಾಸ್ಪತ್ರೆ 0816-2252935 ಸಹಾಯವಾಣಿ ಸಹ ತೆರೆಯಲಾಗಿದೆ. ಡಾ.ಕೆ.ರಾಕೇಶ್ ಕುಮಾರ್ ಜಿಲ್ಲಾಧಿಕಾರಿ ಸರ್ಜಿಕಲ್ ಮಾಸ್ಕ್ ಸ್ಟಾಕ್ ಇಲ್ಲ. ಡಿಸ್ಟ್ರಿಬ್ಯೂಟರ್‌ಗಳಲ್ಲೂ ಸಿಗುತ್ತಿಲ್ಲ. 2-3 ರೂ., ಇದ್ದ ಮಾಸ್ಕ್ ಸಗಟು ಬೆಲೆಯೇ 5 ರೂ., ಆಗಿದೆ. ತುಮಕೂರಲ್ಲಿ ಧೂಳು ಹೆಚ್ಚಿರುವುದರಿಂದ ಮೊದಲಿನಿಂದಲು ಮಾಸ್ಕ್‌ಗಳಿಗೆ ಬೇಡಿಕೆ ಇತ್ತು. ಕರೊನಾ ಭೀತಿ ಬಳಿಕ ಬೇಡಿಕೆ ಇನ್ನೂ ಹೆಚ್ಚಿದೆ. ಸಿ.ಪಿ.ವಿಜಯ್ ಪಿಕೆ ಮೆಡಿಕಲ್ಸ್