

ಮಂಡ್ಯ: ನಿವೇಶನಕ್ಕೆ ನಗರದ ನಿವಾಸಿಗಳ ಒತ್ತಾಯ: ಬಾಡಿಗೆ ಮನೆಯಲ್ಲಿ ವಾಸವಿರುವ ಬಡವರಿಗೆ ನಿವೇಶನ ಹಂಚಿಕೆ ಮಾಡಿ ಮನೆ ನಿರ್ಮಾಣಕ್ಕೆ ಸಹಾಯಧನ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಗರದ ವಿವಿಧ ಬಡಾವಣೆಗಳ ನಿವಾಸಿಗಳು ನಗರಸಭೆ ಕಚೇರಿ ಎದುರು ಪ್ರತಿಭಟಿಸಿದರು.
ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಸಹಯೋಗದಲ್ಲಿ ನಗರಸಭೆ ಎದುರು ಜಮಾಯಿಸಿ ಧರಣಿ ನಡೆಸಿ, ಮಂಡ್ಯ ನಗರದಲ್ಲಿ ಬಡ ಜನತೆ ನಿವೇಶನ, ವಸತಿ, ಹಕ್ಕು ಪತ್ರ ಮತ್ತು ಮೂಲ ಸೌಕರ್ಯಗಳಿಂದ ವಂಚಿತರಾಗಿ ಬದುಕುತ್ತಿದ್ದಾರೆ. ಹೀಗಿದ್ದರೂ ಬಡ ಜನರ ಸಂಕಷ್ಟಕ್ಕೆ ನಗರಸಭೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.
ಮಂಡ್ಯ ನಗರದ ಎಸ್.ಡಿ.ಜಯರಾಂ ಬಡಾವಣೆ, ಬೀಡಿ ಕಾಲನಿ, ಗಾಂಧಿನಗರ, ಹಾಲಹಳ್ಳಿ, ನಾಲಾಬಂದವಾಡಿಯಲ್ಲಿ ವಾಸಿಸುತ್ತಿರುವ ಜನರು ಹಕ್ಕುಪತ್ರಕ್ಕಾಗಿ 94 ಸಿಸಿ ಅಡಿಯಲ್ಲಿ ಅರ್ಜಿ ಹಾಕಿದ್ದಾರೆ. ಅವರಿಗೆ ಹಕ್ಕು ಪತ್ರ ನೀಡಿ ಮೂಲ ಸೌಕರ್ಯ ಕಲ್ಪಿಸಬೇಕು. ನಗರ ವ್ಯಾಪ್ತಿಯಲ್ಲಿ ಸಾವಿರಾರು ಕುಟುಂಬಗಳು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದು, ಇವರಿಗೆ ನಿವೇಶನ ಹಂಚಿಕೆ ಮಾಡಿ ಮನೆ ಕಟ್ಟಿಕೊಳ್ಳಲು ಸರ್ಕಾರದಿಂದ ಧನ ಸಹಾಯ ನೀಡಬೇಕು ಎಂದು ಒತ್ತಾಯಿಸಿದರು.
ನಗರದಲ್ಲಿ ಹದಗೆಟ್ಟಿರುವ ರಸ್ತೆ ಅಭಿವೃದ್ಧಿ ಮಾಡಬೇಕು. ಸರ್ಕಾರಿ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಿ ಬಡವರಿಗೆ ಸಕಾಲದಲ್ಲಿ ವೈದ್ಯಕೀಯ ಸೇವೆ ದೊರಕಿಸಿಕೊಡಬೇಕು. ನಗರದಲ್ಲಿ ನಿರುದ್ಯೋಗ ಮತ್ತು ಬಡತನ ಹೆಚ್ಚುತ್ತಿದ್ದು, ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆಯನ್ನು ನಗರ ಪ್ರದೇಶಕ್ಕೂ ಜಾರಿಗೊಳಿಸಿ ಉದ್ಯೋಗ ನೀಡಿ ಬಡತನ ನಿವಾರಣೆಗೆ ಮುಂದಾಗಬೇಕು ಎಂದು ಆಗ್ರಹಿಸಿದರು.
ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ರಾಜ್ಯಾಧ್ಯಕ್ಷ ಎಂ.ಪುಟ್ಟಮಾದು, ಮುಖಂಡರಾದ ಆರ್.ರಾಜು, ಎಂ.ಎಸ್.ಸಂತೋಷ, ಸಿ.ಕುಮಾರಿ, ಜರೀನಾ, ಅರುಣ್‌ಕುಮಾರ್, ಪಿ.ಹನುಮೇಶ್, ಅಬ್ದುಲ್ಲ, ಮಂಜುಳಾ, ಪ್ರೇಮ ಬೂದನೂರು ಇತರರಿದ್ದರು.