62 ರೈತರ ಸಾಲಮನ್ನಾಕ್ಕೆ ಆಗ್ರಹ

26 mnd 1
Published on

ಮುಂಡಗೋಡ: 2018ರಲ್ಲಿ ಅಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ಅಧಿಕಾರ ಅವಧಿಯಲ್ಲಿ ಮಾಡಿದ ರೈತರ ಸಾಲಮನ್ನಾ ಯೋಜನೆಯಲ್ಲಿ ಇಂದೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ 62 ರೈತರ ಸಾಲಮನ್ನಾ ಆಗಿಲ್ಲ. ಈ ಸಮಸ್ಯೆ ಪರಿಹರಿಸುವಂತೆ ರೈತರು ಒತ್ತಾಯಿಸಿದರು.

ತಾಲೂಕಿನ ಇಂದೂರ ಗ್ರಾಮದ ಕಲ್ಮೇಶ್ವರ ದೇವಸ್ಥಾನದಲ್ಲಿ ಆಯೋಜಿಸಿದ್ದ ಗ್ರಾಮ ವಾಸ್ತವ್ಯ ಮತ್ತು ಪಿಂಚಣಿ ಕಾರ್ಯಕ್ರಮದಲ್ಲಿ ನ್ಯಾಯ ಒದಗಿಸಲು ರೈತರು ಆಗ್ರಹಿಸಿದರು.

ಚಿಕ್ಕ ನೀರಾವರಿ ಇಲಾಖೆಯ ಕಾಲುವೆಗಳಲ್ಲಿ ಹೂಳು ಮತ್ತು ಗಿಡ-ಗಂಟಿಗಳು ಬೆಳೆದು ಕಾಲುವೆಯಲ್ಲಿ ನೀರು ಹರಿಯುತ್ತಿಲ್ಲ. ಈ ಹಿಂದೆ ಅರಣ್ಯ ವ್ಯಾಪ್ತಿಯಲ್ಲಿದ್ದ ಶಾಲೆ ಮತ್ತು ಸ್ಮಶಾನದ ಜಾಗವನ್ನು ಜಿಪಿಎಸ್ ಮಾಡಲಾಗಿತ್ತು. ಆದರೆ, ಈವರೆಗೂ ಜಿಪಿಎಸ್ ಆಗಿಲ್ಲ. ಪಂಚಾಯಿತಿ ವ್ಯಾಪ್ತಿಯಲ್ಲಿ 35 ಫಲಾನುಭವಿಗಳಿಗೆ ಪಿಂಚಣಿ ಬಂದಿಲ್ಲ ಎಂದು ಗ್ರಾಮಸ್ಥರು ತಹಸೀಲ್ದಾರ್ ಗಮನಕ್ಕೆ ತಂದರು.

ಸರ್ವೇ ಅಧಿಕಾರಿ ಮಾತನಾಡಿ, ಈ ಹಿಂದೆ ಸರ್ವೇಗೆ ಅರ್ಜಿಗಳನ್ನು ಸಲ್ಲಿಸಿದರೆ ಅರ್ಜಿದಾರರು ಒಂದು ವರ್ಷದವರೆಗೆ ಕಾಯಬೇಕಿತ್ತು. ಆದರೆ, ಈಗ ಹೆಚ್ಚಿನ ಸಿಬ್ಬಂದಿ ಬಂದಿದ್ದರಿಂದ ಒಂದು ವರ್ಷದಲ್ಲಿ ಆಗುತ್ತಿದ್ದ ಕೆಲಸ ಎರಡ್ಮೂರು ತಿಂಗಳಿನಲ್ಲಿ ಆಗುತ್ತಿದೆ ಎಂದರು.

ರೇಶನ್ ಕಾರ್ಡ್ ಇಲ್ಲದೆ ಇರುವುದರಿಂದ ಭಾಗ್ಯಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಆಗುತ್ತಿಲ್ಲ. ಫಲಾನುಭವಿಗಳು ಯೋಜನೆಯಿಂದ ವಂಚಿತರಾಗುತ್ತಿದ್ದಾರೆ ಎಂದು ಮುಖಂಡ ಬಸವರಾಜ ಸಂಗಮೇಶ್ವರ ತಹಸೀಲ್ದಾರ್ ಗಮನಕ್ಕೆ ತಂದರು. ಆಗ ತಹಸೀಲ್ದಾರ್ ಶಂಕರ ಗೌಡಿ ಮಾತನಾಡಿ, ಕಾರ್ಡ್ ಇಲ್ಲದ ಫಲಾನುಭವಿಗಳ ಯಾದಿ ಮಾಡಿ ಜಿಲ್ಲಾ ಆಹಾರ ನಿರೀಕ್ಷಕರಿಗೆ ಕಳುಹಿಸುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೆಲ್ವೀಚಾರಕಿ ರೂಪಾ ಅಂಗಡಿ ಅವರಿಗೆ ಸೂಚಿಸಿದರು.

ಕಂದಾಯ ಇಲಾಖೆಯ 11 ಅರ್ಜಿಯಲ್ಲಿ 5 ಅರ್ಜಿಗಳನ್ನು ಸ್ಥಳದಲ್ಲಿಯೇ ವಿಲೇವಾರಿ ಮಾಡಲಾಯಿತು. ಅರಣ್ಯ ಇಲಾಖೆಯ 4, ಕೃಷಿ ಇಲಾಖೆಯ ಒಂದು ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಒಂದು ಸೇರಿ ಒಟ್ಟು 57ಅರ್ಜಿಗಳು ಸ್ವೀಕೃತಿಯಾದವು.

ಕೃಷಿ ಅಧಿಕಾರಿ ಎಂ.ಎಸ್. ಕುಲಕರ್ಣಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದಯ್ಯನವರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೆಲ್ವೀಚಾರಕಿ ರೂಪಾ ಅಂಗಡಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಶಶಿಧರ ಪರವಾಪುರ, ಕಸ್ತೂರಿವ್ವ ಹರಿಜನ, ಯಮನಪ್ಪ ಮಾರನಬೀಡ, ಪಂಚಾಯತ್ ರಾಜ್ ಇಲಾಖೆ ಪ್ರಭಾರ ಎಇಇ ಪ್ರದೀಪ ಭಟ್, ತೋಟಗಾರಿಕೆ ಇಲಾಖೆಯ ಅಧಿಕಾರಿ ಕೃಷ್ಣ ಕುಳ್ಳೂರ, ಅಧಿಕಾರಿಗಳು, ಗ್ರಾಮ ಪಂಚಾಯಿತಿ ಸದಸ್ಯರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net