ಭೂಮಿ ಹಕ್ಕುಪತ್ರಕ್ಕಾಗಿ ಆಗ್ರಹ : ಮೂಲ್ಕಿ ತಾಲೂಕು ಕಚೇರಿ ಎದುರು ಆಹೋರಾತ್ರಿ ಧರಣಿ

dharani
Published on

ವಿಜಯವಾಣಿ ಸುದ್ದಿಜಾಲ ಮೂಲ್ಕಿ

ಕರ್ನಾಟಕ-ಕೇರಳ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ, ಕಿನ್ನಿಗೋಳಿ ಕೊರಗ ಅಭಿವೃದ್ಧಿ ಸಂಘ ವತಿಯಿಂದ ಬಳ್ಕುಂಜೆ ಗ್ರಾಮದ ಕೊಲ್ಲೂರುಪದವು ಎಂಬಲ್ಲಿನ ಭೂಮಿಯ ಹಕ್ಕುಪತ್ರಕ್ಕಾಗಿ ಮೂಲ್ಕಿ ತಾಲೂಕು ತಹಸೀಲ್ದಾರ್ ಕಚೇರಿ ಮುಂಭಾಗ ಆಹೋರಾತ್ರಿ ನಿರಂತರ ಧರಣಿ ಸತ್ಯಾಗ್ರಹ ಬುಧವಾರ ಆರಂಭಿಸಿದ್ದಾರೆ.

ಕಳೆದ 15 ವರ್ಷಗಳಿಂದ ತಮಗೆ ಕೃಷಿ ಭೂಮಿ ಒದಗಿಸುವಂತೆ ಸುಮಾರು 30 ಕೊರಗ ಕುಟುಂಬಗಳು ಹೋರಾಟ ನಡೆಸುತ್ತಾ ಬಂದಿದ್ದರು. ಈ ಬಗ್ಗೆ ಸರ್ಕಾರ ಕೊಲ್ಲೂರುಪದವು ಎಂಬಲ್ಲಿ ಪ್ರತಿಯೊಬ್ಬರಿಗೂ ತಲಾ 14 ಸೆಂಟ್ಸ್ ಜಾಗ ನೀಡಲು ಸರ್ವೇ ನಂಬ್ರ 92ರಲ್ಲಿ 7.04 ಎಕರೆ ಜಾಗ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಗೆ ಹಸ್ತಾಂತರಿಸಿತ್ತು. ಸ್ಥಳ ಪರಿಶೀಲನೆ ನಡೆಸಿದ ಕೊರಗ ಕುಟುಂಬಗಳು ಕೊಲ್ಲೂರುಪದವಿನ ಜಾಗ ಯಾವುದೇ ಕಾರಣಕ್ಕೂ ವಾಸ ಯೋಗ್ಯವಾಗಿಲ್ಲ. ಇಳಿಜಾರು ಪ್ರದೇಶವಾದ್ದರಿಂದ ತಮಗೆ ಬೇರೆ ಜಾಗ ನೀಡಬೇಕೆಂದು ಆಗ್ರಹಿಸಿದ್ದಾರೆ.

ಈಗಾಗಲೇ ಕೊರಗ ಸಮುದಾಯದ ಮುಖಂಡರು ಎಳತ್ತೂರು ಬಳಿ ಸರ್ವೇ ನಂಬ್ರ 87ರಲ್ಲಿ 7.40 ಎಕರೆ ಜಾಗ ಗುರುತಿಸಿದ್ದು, ತಮಗೆ ಆ ಜಾಗ ನೀಡುವಂತೆ ಆಗ್ರಹಿಸಿದ್ದಾರೆ.

ಬುಧವಾರ ಐಟಿಡಿಪಿ ಅಧಿಕಾರಿ ಬಸವರಾಜ್, ಇಲಾಖಾಧಿಕಾರಿಗಳೊಂದಿಗೆ ಆಗಮಿಸಿ ಕೊರಗ ಸಮುದಾಯದ ಮುಖಂಡರ ಜತೆ ಸಮಾಲೋಚನೆ ನಡೆಸಿದರು. ಈ ಸಂದರ್ಭ ಕೊಲ್ಲೂರುಪದವಿಗೆ ಅವರ ಜತೆ ತೆರಳಿ ನಿರ್ದೇಶಿತ ಜಾಗ ಪರಿಶೀಲನೆ ನಡೆಸಿದರು. ಆದರೆ ಕೊರಗ ಸಮುದಾಯ ಈ ಜಾಗ ಪಡೆಯಲು ನಿರಾಕರಿಸಿದ್ದಾರೆ.

ಸಮುದಾಯದ ರಾಜ್ಯ ಸಂಯೋಜಕ ಕೆ.ಪುತ್ರನ್ ಮಾತನಾಡಿ, ಸೂಕ್ತ ಜಾಗ ನೀಡುವ ತನಕ ಹೋರಾಟ ಮುಂದುವರಿಯಲಿದೆ. ವಾಸಯೋಗ್ಯ ಜಾಗವೇ ನಮಗೆ ಬೇಕು ಎಂದಿದ್ದಾರೆ. ಮುಖಂಡರಾದ ಸುಂದರ ಗುತ್ತಕಾಡು, ಸುಶೀಲಾ ಮತ್ತಿತರರ ನೇತೃತ್ವದಲ್ಲಿ ಸತ್ಯಾಗ್ರಹ ಮುಂದುವರಿದಿದೆ.

ಈ ಹಿಂದೆಯೂ ತಹಸೀಲ್ದಾರ್ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ್ದರು. ಕಳೆದ ತಿಂಗಳು ಬಳ್ಕುಂಜೆ ಗ್ರಾಪಂ ಎದುರು ಪ್ರತಿಭಟನೆ ನಡೆಸಿದ್ದರು. ಬಳಿಕ ಕೊಲ್ಲೂರುಪದವು ನಿಗದಿತ ಜಾಗದ ಗಡಿ ಗುರುತು ಮಾಡಿ ಹಕ್ಕುಪತ್ರ ಸೆ.15ರೊಳಗೆ ನೀಡದಿದ್ದಲ್ಲಿ ಸೆ.18ರಂದು ಆಹೋರಾತ್ರಿ ಧರಣಿ ನಡೆಸುವ ಬಗ್ಗೆ ಮಾಹಿತಿ ನೀಡಿದ್ದರು. ಯಾವುದೇ ಸ್ಪಂದನೆ ದೊರಕದ ಹಿನ್ನೆಲೆಯಲ್ಲಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ.

ಐಟಿಡಿಪಿ ಅಧಿಕಾರಿ ಬಸವರಾಜ್, ಉಪತಹಸೀಲ್ದಾರ್ ದಿಲೀಪ್ ರೋಡ್ಕರ್ ಕೊರಗ ಸಮುದಾಯದ ಬೇಡಿಕೆಗಳ ಬಗ್ಗೆ ಶೀಘ್ರ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು ಧರಣಿ ನಿರತರು ಜಾಗ ನೀಡುವ ತನಕ ಆಹೋರಾತ್ರಿ ಧರಣಿ ಮುಂದುವರಿಸುತ್ತೇವೆ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net