

ಹುಬ್ಬಳ್ಳಿ: ಉತ್ತರ ಕರ್ನಾಟಕದ ಸಹ್ಯಾದ್ರಿ ಎಂದೇ ಖ್ಯಾತಿ ಪಡೆದಿರುವ ಗದಗ ಜಿಲ್ಲೆಯ ಕಪ್ಪತ್ತಗುಡ್ಡದ ಸಂರಕ್ಷಣೆಗೆ ಕ್ರಮ ಕೈಗೊಳ್ಳಬೇಕೆಂದು ಸಭಾಪತಿ ಬಸವರಾಜ ಹೊರಟ್ಟಿ ಅವರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಅವರು, ಕಪ್ಪತಗುಡ್ಡವು ಈ ಭಾಗದ ಕಾಮಧೇನು. ವನ್ಯ ಜೀವಿಧಾಮ, ಪರಿಸರ ಪ್ರಿಯರಿಗೆ ಸಂತಸ ತರುವ ತಾಣ. ಈ ಭಾಗದ ಚಿನ್ನದ ಗುಡ್ಡ ಎಂದು ಪ್ರಸಿದ್ಧಿ ಪಡೆದುಕೊಂಡಿದೆ. ಆದರೆ, ಈ ಗುಡ್ಡಕ್ಕೆ ಬೇಸಿಗೆಯಲ್ಲಿ ಬೆಂಕಿಯ ಕಾಟವಾದರೆ, ಮಳೆಗಾಲದಲ್ಲಿ ಸಮೃದ್ಧವಾಗಿ ಬೆಳೆದ ಹಸಿರುಗುಡ್ಡಕ್ಕೆ ಪ್ರವಾಸಿಗರಿಂದ ಮತ್ತೊಂದು ರೀತಿಯ ತೊಂದರೆಯಾಗುತ್ತಿದೆ.
ಅಪಾರ ನೈಸರ್ಗಿಕ ಸಂಪತ್ತು ಸಾವಿರಾರು ಔಷಧಿಯ ಗಿಡಮೂಲಿಕೆಯನ್ನು ಹೊಂದಿರುವ ಕಪ್ತತ್ತಗುಡ್ಡ ದೇಶದಲ್ಲಿಯೇ ವೈಶಿಷ್ಟ್ಯತೆ ಹೊಂದಿದೆ. ಇಂತಹ ಸಂಪತ್ತಿನ ಮೇಲೆ ಕಳ್ಳರು ಹಾಗೂ ಕೆಲ ಗಣಿ ಮಾಫಿಯಾದವರ ಕಾಕದೃಷ್ಟಿ ಬಿದ್ದಿದೆ. ಇದಕ್ಕೆ ಕಡಿವಾಣ ಹಾಕುವ ಅವಶ್ಯಕತೆ ಇದೆ.
ನೈಸರ್ಗಿಕ ಸಂಪತ್ತು ನಮ್ಮ ಮುಂದಿನ ಪೀಳಿಗೆಗೆ ಬೇಕು. ಇದನ್ನು ಒಮ್ಮೆ ಹಾಳು ಮಾಡಿದರೆ ಪುನಃ ಪಡೆಯುವುದು ಕಷ್ಟ ಎಂದರಿತು ಸಂರಕ್ಷಣೆಗೆ ವಿಶೇಷ ಆಸಕ್ತಿ ವಹಿಸಬೇಕು ಎಂದು ಮನವಿ ಮಾಡಿದ್ದಾರೆ.