ಬಗರ್‌ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ವಿತರಣೆಗೆ ಆಗ್ರಹ

Published on

ಮೈಸೂರು: ಬಾಕಿ ಇರುವ ಬಗರ್‌ಹುಕುಂ ಸಾಗುವಳಿದಾರರಿಗೆ ತಕ್ಷಣ ಹಕ್ಕುಪತ್ರ ವಿತರಿಸಲು ಜಿಲ್ಲಾ ಹಾಗೂ ತಾಲೂಕು ಆಡಳಿತ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ಭೂ ಹಕ್ಕುದಾರರ ವೇದಿಕೆ ಸಂಚಾಲಕ ಶಿವಲಿಂಗಯ್ಯ ಮನವಿ ಮಾಡಿದರು.
ಎಚ್.ಡಿ.ಕೋಟೆ, ಸರಗೂರು, ನಂಜನಗೂಡು, ಹುಣಸೂರು ಹಾಗೂ ಪಿರಿಯಾಪಟ್ಟಣ ತಾಲೂಕುಗಳಲ್ಲಿ ಬಾಕಿ ಇರುವ ನಮೂನೆ 57ರ ಅರ್ಜಿಗಳಿಗೆ ಸಂಬಂಧಿಸಿದಂತೆ ಬಗರ್‌ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ವಿತರಿಸಬೇಕು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ವೇದಿಕೆಯು ಐದಾರು ವರ್ಷಗಳಿಂದ ರೈತರ ಪರವಾಗಿ, ಅವರ ಸಮಸ್ಯೆಗಳು, ಬಗರ್‌ಹುಕುಂ ಸಾಗುವಳಿ ವಿಚಾರದಲ್ಲಿ ಕೆಲಸ ಮಾಡುತ್ತಿದೆ. ಸದ್ಯದಲ್ಲಿ ಜಿಲ್ಲೆಯ ಎಚ್.ಡಿ.ಕೋಟೆ, ನಂಜನಗೂಡು, ಹುಣಸೂರು ಮತ್ತು ಪಿರಿಯಾಪಟ್ಟಣಗಳಲ್ಲಿ ಕೆಲಸ ಆರಂಭಿಸಿದೆ. ಸುಮಾರು 50-60 ವರ್ಷಗಳಿಂದ ಭೂಮಿ ಉಳುಮೆ ಮಾಡುತ್ತಾ ತಮ್ಮ ಕುಟುಂಬ ನಿರ್ವಹಣೆಗಾಗಿ ಈ ಭೂಮಿಯನ್ನೇ ನಂಬಿ ನಮೂನೆ 53 ಮತ್ತು 57ರ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಸಾಗುವಳಿಗಾಗಿ ಯಾವುದಾದರೊಂದು ದಿನ ಈ ಭೂಮಿಗೆ ಸಾಗುವಳಿ ಸಿಗುತ್ತದೆ ಎಂಬ ಭರವಸೆ ಹೊಂದಿದ್ದಾರೆ. ಆದರೆ, ಇವರಿಗೆ ಭೂಮಿಯ ಹಕ್ಕು ಸಿಗದ ಕಾರಣದಿಂದಾಗಿ ಕೃಷಿ ಮಾಡಿಕೊಂಡು ಬರುತ್ತಿದ್ದರೂ ಸರ್ಕಾರದ ಸವಲತ್ತುಗಳಿಂದ ವಂಚಿತರಾಗಿದ್ದಾರೆ. ಆದ್ದರಿಂದ ಸರ್ಕಾರ ಈಗಲಾದರೂ ಹಕ್ಕುಪತ್ರಗಳನ್ನು ಅರ್ಹ ರೈತರಿಗೆ ನೀಡಬೇಕೆಂದು ಮನವಿ ಮಾಡಿದರು.
ಸದ್ಯದಲ್ಲಿ ನಮೂನೆ 57ರ ಅಡಿಯಲ್ಲಿ ಎಚ್.ಡಿ.ಕೋಟೆಯಲ್ಲಿ 7,850, ಸರಗೂರು ತಾಲೂಕಿನಲ್ಲಿ 3,325, ನಂಜನಗೂಡು ತಾಲೂಕಿನಲ್ಲಿ 5,584, ಹುಣಸೂರು ತಾಲೂಕಿನಲ್ಲಿ 3,458 ಮತ್ತು ಪಿರಿಯಾಪಟ್ಟಣ ತಾಲೂಕಿನಲ್ಲಿ 4,876 ಅರ್ಜಿ ಬಾಕಿ ಇವೆ. ಈಗಾಗಲೇ ಎಚ್.ಡಿ.ಕೋಟೆ, ಸರಗೂರು ತಾಲೂಕುಗಳಲ್ಲಿ ಭೂ ಸಕ್ರಮೀಕರಣ ಸಮಿತಿ ಆದಷ್ಟು ಶೀಘ್ರ ತನ್ನ ಕೆಲಸ ಆರಂಭಿಸಬೇಕು, ಇನ್ನಿತರ ತಾಲೂಕುಗಳಲ್ಲಿ ಭೂ ಸಕ್ರಮೀಕರಣ ಸಮಿತಿ ರಚಿಸಬೇಕು ಎಂದು ಒತ್ತಾಯಿಸಿದರು.
ಮುಖಂಡರಾದ ವೆಂಕಟಾ ಭೋವಿ, ರಾಜಮುಡಿ, ಕೆ.ಎಂ. ಸುಶೀಲಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net