

ಮಂಡ್ಯ: ಮೈಷುಗರ್ ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕ ಅಪ್ಪಾಸಾಹೇಬ್ ಚನ್ನೇಗೌಡ ಪಾಟೀಲ್ ಅವರ ಕರ್ತವ್ಯ ನಿರ್ಲಕ್ಷೃತನದಿಂದ ಸುಮಾರು 40 ಕೋಟಿ ರೂ ನಷ್ಟವಾಗಿದ್ದು, ಇದನ್ನು ತನಿಖೆಗೊಳಪಡಿಸಬೇಕೆಂದು ಒತ್ತಾಯಿಸಿ ಮನವಿ ಸಲ್ಲಿಸಲಾಯಿತು.
ನಗರಸಭೆ ಮಾಜಿ ಸದಸ್ಯ ಶಿವಕುಮಾರ್ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ ಮುಖಂಡರು, ಜಿಲ್ಲಾಧಿಕಾರಿ ಕಚೇರಿ ಸಹಾಯಕ ಅಧಿಕಾರಿ ರೋಹಿಣಿ ಮನವಿ ಸಲ್ಲಿಸಿದರು. ಅಪ್ಪಾಸಾಹೇಬ್ ಚನ್ನೇಗೌಡ ಪ್ರಧಾನ ವ್ಯವಸ್ಥಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಎಸಗಿದ್ದ ಭ್ರಷ್ಟಾಚಾರದ ವಿರುದ್ಧ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಗೆ ದೂರು ಸಲ್ಲಿಕೆಯಾಗಿದೆ. ಮಾತ್ರವಲ್ಲದೆ ತನಿಖೆ ನಡೆಸಲು ಆದೇಶವಾಗಿದೆ. ಆದಾಗ್ಯೂ ಕಾರ್ಖಾನೆಯಲ್ಲಿ ಹಲವಾರು ದಾಖಲೆಗಳನ್ನು ನಾಶಪಡಿಸಲು ಹುನ್ನಾರ ಮಾಡುತ್ತಿದ್ದಾರೆ. ಮಾತ್ರವಲ್ಲದೆ ಅರಣ್ಯಾಧಿಕಾರಿಗಳ ಅನುಮತಿ ಇಲ್ಲದೆ ದೊಡ್ಡ ಗಾತ್ರದ ಮರಗಳನ್ನು ಕಡಿದು ವಿಲೇವಾರಿ ಮಾಡಿದ್ದಾರೆ. ಆದ್ದರಿಂದ ಈ ಬಗ್ಗೆ ತನಿಖೆ ನಡೆಸಬೇಕು. ಜತೆಗೆ ವ್ಯವಸ್ಥಾಪಕ ನಿರ್ದೇಶಕ ಸ್ಥಾನದಿಂದ ಅಮಾನತುಗೊಳಿಸಬೇಕೆಂದು ಆಗ್ರಹಿಸಿದರು.
ಮುಖಂಡರಾದ ಪ್ರಸನ್ನಕುಮಾರ್, ಸಚಿನ್, ಅನಿಲ್ಕುಮಾರ್, ಸುನಿಲ್ಕುಮಾರ್, ದೀಪಕ್ ಇದ್ದರು.