ಮಾದಿಗರ ಸಮಾವೇಶದಲ್ಲಿ ಒಳ ಮೀಸಲಾತಿಗೆ ಆಗ್ರಹ

maadiga sammelana
Published on

ಮಡಿಕೇರಿ: ಮಾದಿಗರಿಗೆ ಒಳ ಮೀಸಲಾತಿ ಸಿಗಬೇಕು. ಆ ಮೂಲಕ ಅವರು ಸಮಾಜದ ಮುಖ್ಯ ವಾಹಿನಿಗೆ ಬರುವಂತಾಗಬೇಕು ಎಂದು ಬಿಜೆಪಿ ಪರಿಶಿಷ್ಟ ಜಾತಿ ಮೋರ್ಚಾದ ಮಾಜಿ ರಾಜ್ಯ ಪ್ರಧಾನ ಕಾರ್ಯದರ್ಶಿ ಜಗದೀಶ್ ಆಗ್ರಹಿಸಿದರು.


ಮಡಿಕೇರಿಯ ರೋಟರಿ ಸಭಾಂಗಣದಲ್ಲಿ ನಡೆದ ಕೊಡಗು ಜಿಲ್ಲಾ ಮಾದಿಗರ ಆತ್ಮ ಗೌರವ ಸಮಾವೇಶದಲ್ಲಿ ಮಾತನಾಡಿ, ಕಳೆದ ೨೬ ವರ್ಷಗಳಿಂದ ರಾಜ್ಯದಲ್ಲಿ ಒಳ ಮೀಸಲಾತಿಗಾಗಿ ಹೋರಾಟ ನಡೆದಿದೆ. ಅದಕ್ಕಾಗಿ ೯ ಜನರ ಬಲಿದಾನವಾಗಿದೆ. ಮೀಸಲಾತಿ ಸಿಕ್ಕಿದಾಗ ಈ ಬಲಿದಾನಗಳಿಗೆ ಶಾಂತಿ ಸಿಗಲಿದೆ. ಕೊಡಗು ಜಿಲ್ಲೆಯಲ್ಲಿ ಎಂಟು ಸಾವಿರಕ್ಕೂ ಅಧಿಕ ಮಾದಿಗ ಜನಾಂಗದ ಬಂಧುಗಳಿದ್ದಾರೆ ಎಂದು ಹೇಳಿದರು.


ತುಮಕೂರಿನ ಡಾ.ಲಕ್ಷ್ಮಿಕಾಂತ್ ಮಾತನಾಡಿ, ಮಾದಿಗ ಜನಾಂಗ ಬಂಧುಗಳು ಶೈಕ್ಷಣಿಕವಾಗಿ ಸಾಮಾಜಿಕವಾಗಿ ರಾಜಕೀಯವಾಗಿ ಸಬಲರಾಗಬೇಕು. ಸ್ವಾತಂತ್ರ್ಯ ಬಂದು ಕಳೆದ ೭೫ ವರ್ಷ ಕಳೆದರೂ ಇನ್ನೂ ಕೂಡ ಸಮಾಜ ಬಂದುಗಳು ಎಚ್ಚೆತ್ತುಕೊಂಡಿಲ್ಲ ಎಂದು ವಿಷಾದಿಸಿದ ಅವರು ಒಳ ಮೀಸಲಾತಿ ಬಗ್ಗೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಬೊಗಳೆ ಬಿಡುತ್ತಿದ್ದಾರೆ. ಒಳ ಮೀಸಲಾತಿಯ ಬಗ್ಗೆ ಸುಪ್ರೀಂ ಕೋರ್ಟಿನಲ್ಲಿ ವ್ಯಾಜ್ಯ ನಡೆಯುತ್ತಿದ್ದರೂ ಒಳ ಮೀಸಲಾತಿಯ ಪರವಾಗಿದ್ದೀರಾ ಅಥವಾ ವಿರೋಧ ಇದ್ದೀರಾ ಅನ್ನೋದನ್ನು ಸ್ಪಷ್ಟಪಡಿಸುತ್ತಿಲ್ಲ ಎಂದು ಆರೋಪಿಸಿದ ಅವರು, ಸಮಾಜದ ಬಂಧುಗಳು ಶೈಕ್ಷಣಿಕವಾಗಿ ಮುಂದುವರೆದಾಗ ಸಮಾಜ ಬಂಧುಗಳು ಎಚ್ಚೆತ್ತುಕೊಳ್ಳುತ್ತಾರೆ ಎಂಬ ಅಭಿಪ್ರಾಯಪಟ್ಟರು.


ಮೈಸೂರಿನ ವಕೀಲರಾದ ಎಚ್.ಕೆ.ಭಾಗ್ಯ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಮಾದಿಗ ಜನಾಂಗ ಇಲ್ಲ ಎನ್ನುವ ಮಾಹಿತಿ ಇದೆ. ಆದರೆ, ಕೊಡಗು ಜಿಲ್ಲೆಯಲ್ಲಿ ಮಾದಿಗ ಸಮಾಜದ ಬಂಧುಗಳು ಇದ್ದಾರೆ. ಶೈಕ್ಷಣಿಕವಾಗಿ ಶಿಕ್ಷಣವನ್ನು ಪಡೆದಾಗ ಮಾತ್ರ ಜನಾಂಗ ಬಂಧುಗಳು ಸಮಾಜದ ಮುಖ್ಯ ವಾಹಿನಿಗೆ ಬರಲು ಸಾಧ್ಯ. ಮಾದಿಗ ಜನಾಂಗಕ್ಕೆ ಒಳ ಮೀಸಲಾತಿ ಸಿಗಬೇಕು ಎಂದು ಅಭಿಪ್ರಾಯಪಟ್ಟರು.


ಮಾಜಿ ಸಚಿವರು, ಮಾದಿಗ ಜನಾಂಗದ ರಾಜ್ಯ ಪ್ರಮುಖರಾದ ಕೋಟೆ ಶಿವಣ್ಣರವರು ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿ, ಮಾದಿಗ ಜನಾಂಗ ಬಂಧುಗಳು ಸಾಮಾಜಿಕವಾಗಿ ಶೈಕ್ಷಣಿಕವಾಗಿ ಹಾಗೂ ರಾಜಕೀಯವಾಗಿ ಸಬಲರಾಗಬೇಕು. ಮಾದಿಗ ಜನಾಂಗ ಬಂಧುಗಳಿಗೆ ಒಳ ಮೀಸಲಾತಿ ಸಿಗಬೇಕು ಎಂದು ಆಗ್ರಹಿಸಿದರು.


ಸಮಾವೇಶದಲ್ಲಿ ಕಗ್ಗುಂಡಿ ಶ್ರೀ ಗುರು ಹರಳಯ್ಯ ಗುರುಮಠದ ಶ್ರೀ ರುದ್ರಪ್ಪ ಸ್ವಾಮಿಗಳು ಸಾನಿಧ್ಯ ವಹಿಸಿ ಆಶೀರ್ವಚನ ಮಾಡಿದರು. ವೇದಿಕೆಯಲ್ಲಿ ಪ್ರಮುಖರಾದ ಪಿಳ್ಳ ಮುನಿಶಾಮಪ್ಪ, ಹೂಡಿ ಮಂಜುನಾಥ್ ನಾಗೇಂದ್ರ ಅರಕಲವಾಡಿ, ಬಿ.ಎನ್.ಗಂಗಾಧರಪ್ಪ ಹಾಗೂ ಇತರರು ಇದ್ದರು. ಸಮಾವೇಶದ ಅಧ್ಯಕ್ಷತೆಯನ್ನು ಮೈಸೂರಿನ ಮಾದಿಗ ಮಹಾಸಭಾದ ಅಧ್ಯಕ್ಷ ಶ್ರೀನಿವಾಸ್ ವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net