

ಹುಬ್ಬಳ್ಳಿ : ಇಲ್ಲಿನ ಚನಮ್ಮ ಮೈದಾನದಲ್ಲಿ ಈ ಬಾರಿ 11 ದಿನದವರೆಗೆ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಅನುಮತಿ ನೀಡುವಂತೆ ಶ್ರೀರಾಮ ಸೇನಾ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ ಅವರು ಮಹಾನಗರ ಪಾಲಿಕೆ ಆಯುಕ್ತರನ್ನು ಆಗ್ರಹಿಸಿದ್ದಾರೆ.
ಕಳೆದ ಎರಡು ವರ್ಷದಿಂದ ಮೂರು ದಿನಗಳವರೆಗೆ ಮಾತ್ರ ಚನ್ನಮ್ಮಮೈದಾನದಲ್ಲಿ ಸಾರ್ವಜನಿಕ ಗಣೇಶೋತ್ಸವ ಆಚರಿಸಲು ಅನುಮತಿ ನೀಡಲಾಗಿದೆ. ಈ ಅವಧಿಯಲ್ಲಿ ಶಾಂತರೀತಿಯಿಂದ ಉತ್ಸವ ಆಚರಿಸಲಾಗಿದೆ ಎಂದು ತಿಳಿಸಿದ್ದಾರೆ.
ಈ ಬಾರಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಹೀಗಾಗಿ, 11 ದಿನಗಳವರೆಗೆ ಗಣೇಶ ಮೂರ್ತಿ ಸ್ಥಾಪನೆಗೆ ಅನುಮತಿ ನೀಡಬೇಕು. ಹಿಂದುಗಳು ಶಾಂತಸ್ವಭಾವದವರಾಗಿದ್ದು, ಯಾವುದೇ ರೀತಿಯ ಗದ್ದಲಗಳು ಆಗುವುದಿಲ್ಲ ಎಂದು ಹೇಳಿದ್ದಾರೆ.
ಚನ್ನಮ್ಮ ಮೈದಾನದಲ್ಲಿ ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಕೆಲವರು ವಿರೋಧ ವ್ಯಕ್ತಪಡಿಸುತ್ತಿರುವುದು ಕೇಳಿಬರುತ್ತಿದೆ. ಈ ರೀತಿಯ ವಿರೋಧ ಮುಂದುವರೆದರೆ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆಗೂ ವಿರೋಧ ವ್ಯಕ್ತಪಡಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ಫ್ಲೈ ಓವರ್ ನಿರ್ಮಾಣ ಕಾಮಗಾರಿಗೆ ಚನ್ನಮ್ಮ ಮೈದಾನದ ಬಳಿ ಎರಡು ಕಂಬಗಳನ್ನು ನಿರ್ವಿುಸಲು ಮೈದಾನದ ಗೋಡೆ ಕೆಡಬೇಕಿದೆ. ಇದಕ್ಕಾಗಿ ಅಧಿಕಾರಿಗಳು ಗೋಡೆ ತೆರವಿಗೆ ಅನುಮತಿ ಕೇಳಿದ್ದಾರೆಂಬ ಮಾಹಿತಿ ಇದೆ. ನ್ಯಾಯಾಲಯದ ಆದೇಶದ ಪ್ರಕಾರ ಸರ್ಕಾರ ಕೈಗೊಳ್ಳುವ ಅಭಿವೃದ್ಧಿ ಕಾಮಗಾರಿಗಳಿಗೆ ಅಡ್ಡಿಬರುವ ದೇವಸ್ಥಾನ, ಚರ್ಚ್, ಮಸೀದಿ, ದರ್ಗಾಗಳನ್ನು ತೆರವುಗೊಳಿಸಲು ಅನುಮತಿ ಬೇಕಿಲ್ಲ. ಈಗಾಗಲೇ ಹಳೇ ಬಸ್ ನಿಲ್ದಾಣದ ಬಳಿ ಬಸವೇಶ್ವರ ಮೂರ್ತಿ ಸ್ಥಳಾಂತರಿಸಲಾಗಿದೆ. ಅದೇ ರೀತಿ ಯಾವುದೇ ಅನುಮತಿ ಇಲ್ಲದೇ ಚನ್ನಮ್ಮ ಮೈದಾನದ ಗೋಡೆಗಳನ್ನು ತೆರವುಗೊಳಿಸಿ, ಫ್ಲೈ ಓವರ್ ನಿರ್ಮಾಣ ಕಾಮಗಾರಿ ಮುಂದುವರೆಸಬೇಕು ಎಂದು ಆಗ್ರಹಿಸಿದ್ದಾರೆ.