ಭಾರತೀಯ ಕರಕುಶಲ ವಸ್ತುಗಳಿಗೆ ಬೇಡಿಕೆ ಹೆಚ್ಚು: ಆರ್.ಕೆ.ಬಾಲಚಂದ್ರ

karakushala
Published on

ಕುಶಾಲನಗರ: ಭಾರತೀಯ ಕರಕುಶಲ ವಸ್ತುಗಳಿಗೆ ಬೇಡಿಕೆ ಹೆಚ್ಚಿದೆ ಎಂದು ಜಿಲ್ಲಾ ಲೀಡ್ ಬ್ಯಾಂಕ್‌ನ ನಿವೃತ್ತ ಪ್ರಬಂಧಕ ಆರ್.ಕೆ.ಬಾಲಚಂದ್ರ ಹೇಳಿದರು.

ಕೇಂದ್ರ ಸರ್ಕಾರದ ಕರಕುಶಲ ಮತ್ತು ಜವಳಿ ಮಂತ್ರಾಲಯ ಇಲಾಖೆಯ ಮೈಸೂರಿನ ಕರಕುಶಲ ವಿಸ್ತರಣಾ ಸೇವಾ ಕೇಂದ್ರದ ವತಿಯಿಂದ ಕುಶಾಲನಗರ ಪಟ್ಟಣದ ಕನ್ನಡ ಭಾರತಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮೂರು ದಿನಗಳ ಕಾಲದ ಕರಕುಶಲ ವಸ್ತುಗಳ ತಯಾರಿಕೆ ಶಿಬಿರ ಹಾಗೂ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ವೈವಿಧ್ಯಮಯ ಸಾಂಪ್ರದಾಯಿಕ ಕಲೆ ಮತ್ತು ಸಂಸ್ಕೃತಿಯ ಸಮ್ಮಿಲನವಾಗಿರುವ ಭಾರತ ದೇಶವು ಶ್ರೀಮಂತ ಕಲೆಯಾದ ಕರಕುಶಲ ಕಲೆಗೆ ಪ್ರಸಿದ್ಧಿಯಾಗಿದೆ. ಭಾರತದ ಕರಕುಶಲ ವಸ್ತುಗಳು ಕರಕುಶಲವು ಕೈ ಉಪಕರಣಗಳೊಂದಿಗೆ ಕೈಯಿಂದ ವಸ್ತುಗಳನ್ನು ಸಂಸ್ಕರಿಸುವುದು ಪುರಾತನ ಕಾಲದಿಂದಲೂ ರೂಢಿಯಾಗಿ ಬಂದಿದೆ ಎಂದರು.

ಭಾರತೀಯ ಶ್ರೀಮಂತ ಕಲೆಯಾದ ಕರಕುಶಲ ಕಲೆಯು ತಲೆ ತಲೆಮಾರುಗಳಿಂದ ಬಂದಿದ್ದು, ಭಾರತದ ಕರಕುಶಲ ವಸ್ತಗಳಿಗೆ ಪ್ರಪಂಚದಾದ್ಯಂತ ಹೆಚ್ಚಿನ ಬೇಡಿಕೆ ಇದೆ. ಈ ಹಿನ್ನೆಲೆಯಲ್ಲಿ ಇಂತಹ ಕರಕುಶಲ ತರಬೇತಿ ಶಿಬಿರಗಳಿಗೆ ಇತ್ತಿಚಿನ ದಿನಗಳಲ್ಲಿ ಹೆಚ್ಚಿನ ಬೇಡಿಕೆ ಬಂದಿದೆ. ಕರಕುಶಲ ತರಬೇತಿಗಳನ್ನು ಪಡೆದವರಿಗೆ ಅನೇಕ ಉದ್ಯೋಗವಕಾಶಗಳಿವೆ. ವಿದ್ಯಾರ್ಥಿಗಳು ಕರಕುಶಲ ಕಲೆಯಿಂದ ಕ್ರಿಯಾಶೀಲ ಮತ್ತು ಸೃಜನಶೀಲತೆ ಬೆಳೆಸಿಕೊಳ್ಳಲು ಸಾಧ್ಯ ಎಂದ ಅವರು, ವಿದ್ಯಾರ್ಥಿಗಳು ತಮ್ಮ ಬದುಕನ್ನು ಸವಾಲಾಗಿ ಸ್ವೀಕರಿಸಿ ಬದುಕಿನ ಮಜಲುಗಳನ್ನು ಎದುರಿಸುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು ಎಂದರು.

ಶಿಬಿರದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದ ಶಿಬಿರದ ಜಿಲ್ಲಾ ಸಂಯೋಜಕರು ಮತ್ತು ಕುಶಲಕರ್ಮಿ ಜಿ.ಧರ್ಮಪ್ಪ, ಈ ಕಲೆಯನ್ನು ಉತ್ತೇಜಿಸುವ ಉದ್ದೇಶದಿಂದ ಪ್ರತಿ ಜಿಲ್ಲೆಗಳಲ್ಲಿ ಇಂತಹ ಶಿಬಿರಗಳನ್ನು ಸಂಘಟಿಸಲಾಗುತ್ತಿದೆ ಎಂದರು.

ಈ ಶಿಬಿರದಲ್ಲಿ ಬಿದಿರು ಕಲೆ, ಮರ ಕೆತ್ತನೆ, ಮಣ್ಣಿನ ಕಲಾಕೃತಿಗಳ ತಯಾರಿಕೆ ಸೇರಿದಂತೆ ಇನ್ನಿತರ ಕರಕುಶಲ ಕಲೆಗಳ ಬಗ್ಗೆ

ತರಬೇತಿ ನೀಡಲಾಗುವುದು ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಪದವಿ ಕಾಲೇಜಿನ ಪ್ರಾಂಶುಪಾಲ ಕೆ.ಎಸ್.ರುದ್ರಪ್ಪ ಮಾತನಾಡಿ, ಕರಕುಶಲ ಕಲೆಯಿಂದ ಆರ್ಥಿಕ ಬದುಕನ್ನು ರೂಪಿಸಿಕೊಳ್ಳಲು ಸಾಧ್ಯ. ನಮ್ಮ ದೇಶದ ಆರ್ಥಿಕಾವೃದ್ಧಿಗೆ ಕರಕುಶಲ ಕಲೆ ಕೂಡ ಸಹಕಾರಿಯಾಗಿವೆ ಎಂದರು.

ಶಿಬಿರದ ಧ್ಯೇಯೋದ್ದೇಶಗಳ ಬಗ್ಗೆ ಮಾಹಿತಿ ನೀಡಿದ ಸಚಿವಾಲಯದ ವಿಸ್ತರಣಾ ಕೇಂದ್ರದ ಅಭಿವೃದ್ಧಿ ಅಧಿಕಾರಿ ಎಂ.ಬಿ.ಶಾಬೀರ, ಕರಕುಶಲ ಕಲೆಯು ಶ್ರೀಮಂತ ಪರಂಪರೆಯನ್ನು ಸಂರಕ್ಷಿಸುವ ಮತ್ತು ಉತ್ತೇಜಿಸುವ ದಿಸೆಯಲ್ಲಿ ಇಂತಹ ಜಾಗೃತಿ ಶಿಬಿರಗಳನ್ನು ಸಂಘಟಿಸಲಾಗುತ್ತಿದೆ ಎಂದರು.

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಸಮಿತಿಯ ಅಧ್ಯಕ್ಷ ಟಿ.ಜಿ.ಪ್ರೇಮಕುಮಾರ್ ಮಾತನಾಡಿ, ಇಂತಹ ಶಿಬಿರಗಳು ವಿದ್ಯಾರ್ಥಿಗಳಲ್ಲಿ ತಮ್ಮ ಕಲಿಕೆಯೊಂದಿಗೆ ವೃತ್ತಿಪರ ಬದುಕಿಗೆ ಸಹಕಾರಿಯಾಗಿವೆ ಎಂದರು.

ಶಿಬಿರದಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ಕರಕುಶಲ ಕಲೆ ಹಾಗೂ ಕಲಾಕೃತಿಗಳ ಕುರಿತು ಪ್ರಾತ್ಯಕ್ಷಿಕೆ ನೀಡಲಾಯಿತು. ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ಎನ್.ಚಂದ್ರಮೋಹನ್, ಪಿಯೂ ಕಾಲೇಜಿನ ಪ್ರಾಂಶುಪಾಲ ಡಾ.ಎನ್.ನಾಗೇಂದ್ರಸ್ವಾಮಿ, ಸಚಿವಾಲಯದ ಅಭಿವೃದ್ಧಿ ಅಧಿಕಾರಿ ಸ್ವದೇಶ್ ಘಾರ, ಸಿಬ್ಬಂದಿ ಎಚ್.ಜಿ.ಮಹೇಶ್, ಕಾಲೇಜಿನ ವಿದ್ಯಾರ್ಥಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net