ಹಿಂದುಳಿದ ವರ್ಗ 2ಎ ಮತ್ತು ಪ್ರವರ್ಗ-1ರ ಮೀಸಲಾತಿ ಹೆಚ್ಚಿಸುವಂತೆ ಒತ್ತಾಯ

3
Published on

ಮೈಸೂರು: ಹಿಂದುಳಿದ ವರ್ಗ 2ಎ ಮತ್ತು ಪ್ರವರ್ಗ-1ರ ಮೀಸಲಾತಿ ಹೆಚ್ಚಿಸುವಂತೆ ಒತ್ತಾಯಿಸಿ, ಎಸ್‌ಟಿ ಮತ್ತು ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ, ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಲಾಯಿತು.

ಪ್ರಸ್ತುತ ಮೀಸಲಾತಿಯ ಆಶಯಕ್ಕೆ ವಿರುದ್ಧವಾಗಿ, ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಿ ತಳ ಸಮುದಾಯಗಳನ್ನು ಮೀಸಲಾತಿಯಿಂದ ವಂಚಿಸುವ ಹುನ್ನಾರಕ್ಕೆ ಸರ್ಕಾರ ಕೈಹಾಕಿದೆ. ಕೇಂದ್ರ ಸರ್ಕಾರ ಸಂವಿಧಾನಕ್ಕೆ 103ನೇ ತಿದ್ದುಪಡಿ ತರುವ ಮೂಲಕ ಒಟ್ಟಾರೆ ಜನಸಂಖ್ಯೆಯಲ್ಲಿ ಶೇ.4-5ರಷ್ಟಿರುವವರಿಗೆ ಶೇ.10 ರಷ್ಟು ಮೀಸಲಾತಿ ನೀಡಿರುವುದರಿಂದ ಇತರ ಹಿಂದುಳಿದ ವರ್ಗಗಳಿಗೆ ಅನ್ಯಾಯವಾಗಿದೆ. ಇತರ ಹಿಂದುಳಿದ ವರ್ಗಗಳಿಗೂ ಅವರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚಿಸಬೇಕು. ಪ್ರಸ್ತುತ 2ಎ ವರ್ಗಕ್ಕೆ ಶೇ.15 ರಷ್ಟು ಮೀಸಲಾತಿ ಇದ್ದು, ಈ ವರ್ಗಗಳ ಜನಸಂಖ್ಯೆಗೆ ಅನುಗುಣವಾಗಿ ಮಂಡಲ್ ವರದಿಯ ಶಿಫಾರಸಿನಂತೆ ಶೇ.27ಕ್ಕೆ ಹೆಚ್ಚಿಸಬೇಕು. ಪ್ರವರ್ಗ-1ರಡಿಯಲ್ಲಿ ಬರುವ ಮೀಸಲಾತಿ ಪ್ರಮಾಣ ಶೇ.4ರಷ್ಟಿದ್ದು, ಅದನ್ನು ಶೇ.9ಕ್ಕೆ ಹೆಚ್ಚಿಸಬೇಕೆಂದು ಆಗ್ರಹಿಸಿದರು.

ಕೇಂದ್ರ ಸರ್ಕಾರ ಎಸ್‌ಸಿ, ಎಸ್‌ಟಿ, ಒಬಿಸಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ರದ್ದುಗೊಳಿಸಿರುವುದು ಖಂಡನೀಯ. ಎರಡು ವರ್ಷಗಳಿಂದಲೂ ವಿದ್ಯಾರ್ಥಿ ವೇತನ ನೀಡದೆ ವಂಚಿಸಲಾಗಿದೆ. ಇದು ಎಸ್‌ಸಿ, ಎಸ್‌ಟಿ, ಒಬಿಸಿ ವಿದ್ಯಾರ್ಥಿಗಳನ್ನು ಶಿಕ್ಷಣದಿಂದ ವಂಚಿತಗೊಳಿಸಿ ಅವರನ್ನು ಶಿಕ್ಷಣದಿಂದ ವಿಮುಖಗೊಳಿಸುವ ಉದ್ದೇಶವಾಗಿದೆ. ಹೀಗಾಗಿ ಕೂಡಲೇ ಸರ್ಕಾರ ಎಚ್ಚೆತ್ತು ವಿದ್ಯಾರ್ಥಿ ವೇತನ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net