

ಹಾನಗಲ್ಲ: ಮಾಸಾಶನ ಹೆಚ್ಚಳ, ಕಲಾವಿದರಿಗೆ ಪ್ರಾಯೋಜಿತ ಕಾರ್ಯಕ್ರಮ ಒದಗಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ತಾಲೂಕು ವಿವಿಧ ಕಲಾವಿದರ ಸಂಘ ಸರ್ಕಾರವನ್ನು ಆಗ್ರಹಿಸಿದೆ.
ತಾಲೂಕಿನ ಕೂಸನೂರ ಗ್ರಾಮದ ಕಲಾವಿದರ ಸಂಘದ ಕಾರ್ಯಾಲಯದಲ್ಲಿ ಸಂಘದ ತಾಲೂಕು ಅಧ್ಯಕ್ಷ ಎಸ್.ಎಸ್. ಮೂರಮಟ್ಟಿ ಅಧ್ಯಕ್ಷತೆಯಲ್ಲಿ ಗುರುವಾರ ಆಯೋಜಿಸಿದ್ದ ಸಭೆಯಲ್ಲಿ ಸದಸ್ಯರು ಹಲವು ಬೇಡಿಕೆಗಳ ಕುರಿತು ರ್ಚಚಿಸಿ, ಸರ್ಕಾರವನ್ನು ಒತ್ತಾಯಿಸಿದರು.
ಕಲಾವಿದರ ಮಾಸಾಶನ 5 ಸಾವಿರ ರೂಪಾಯಿಗೆ ಏರಿಸಬೇಕು. ದೂರದರ್ಶನ ಮತ್ತು ಸಾಮಾಜಿಕ ಜಾಲತಾಣಗಳ ಭರದಲ್ಲಿ ಕಲಾವಿದರಿಗೆ ವೇದಿಕೆಗಳು ಸಿಗದಂತಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೂಲಕ ಕಲಾವಿದರ ಪ್ರತಿಭೆ ಅನಾವರಣಗೊಳಿಸಲು ಪ್ರಾಯೋಜಿತ ಕಾರ್ಯಕ್ರಮಗಳ ಮೂಲಕ ವೇದಿಕೆ ಕಲ್ಪಿಸಬೇಕು. ಸರ್ಕಾರದಿಂದ ಪ್ರತಿವರ್ಷ ಕೊಡಮಾಡುವ ಪ್ರಶಸ್ತಿ-ಪುರಸ್ಕಾರಗಳು ಅರ್ಹ ಕಲಾವಿದರಿಗೆ ದೊರಕಬೇಕು. ಬಾಡಿಗೆ ಮನೆಗಳಲ್ಲಿ ವಾಸವಾಗಿರುವ ಕಲಾವಿದರಿಗೆ ಆಶ್ರಯ ಯೋಜನೆಯಡಿ ನಿವೇಶನ, ಮನೆ ನೀಡಬೇಕು ಎಂದು ಸಂಘದ ಪದಾಧಿಕಾರಿಗಳು ಆಗ್ರಹಿಸಿದರು.
ಸಭೆಯಲ್ಲಿ ಸಂಘದ ಗೌರವಾಧ್ಯಕ್ಷ ಫಕೀರಪ್ಪ ಗೌರಕ್ಕನವರ, ಉಪಾಧ್ಯಕ್ಷ ರಾಮಕೃಷ್ಣ ಸುಗಂಧಿ, ಕಾರ್ಯದರ್ಶಿ ಕೃಷ್ಣಾಚಾರ ಉಪಾಧ್ಯಾಯ, ಪದಾಧಿಕಾರಿಗಳಾದ ದೇವೇಂದ್ರಪ್ಪ ಮಂಟೂರ, ಶಿವಪ್ಪ ಬ್ಯಾತನಾಳ, ಸುಭಾಷ ಕಮ್ಮಾರ, ವಿರೂಪಾಕ್ಷಪ್ಪ ಮಾಸನಕಟ್ಟಿ, ಸುಭಾಷಚಂದ್ರ ಕುರುಬರ, ನಾಗನಗೌಡ ಪಾಟೀಲ, ಬಸವರಾಜ ಕೋಳೂರ, ಮಹಿಳಾ ಕಲಾವಿದರಾದ ಜಯಮ್ಮ ಮಳೆಣ್ಣನವರ, ನೀಲಮ್ಮ ಗೊಂದಿ, ಪ್ರೇಮಕ್ಕ ಕ್ಯಾಸನೂರ, ಪ್ರೇಮಾ ಕೋಡಿಹಳ್ಳಿ, ರೇಣುಕಾ ಬಣಕಾರ, ರತ್ನವ್ವ ಕೋಟಿ, ರೇಣುಕವ್ವ ಬಣಕಾರ ಇತರರು ಉಪಸ್ಥಿತರಿದ್ದರು.