

ಮಂಡ್ಯ: ಬಿ.ಹೊಸೂರು ಕಾಲನಿಯಲ್ಲಿ ನಿರ್ಮಾಣವಾಗಿರುವ ಹೆರಿಗೆ ಆಸ್ಪತ್ರೆ, ಕ್ಯಾನ್ಸರ್ ಆಸ್ಪತ್ರೆ ಉದ್ಘಾಟಿಸಿ ರೋಗಿಗಳಿಗೆ ನೆರವಾಗಬೇಕು ಎಂದು ಆಗ್ರಹಿಸಿ ಕನ್ನಡ ಸೇನೆ ಸಂಘಟನೆಯ ಕಾರ್ಯಕರ್ತರು ಜಿಲ್ಲಾಧಿಕಾರಿ ಕುಮಾರ ಅವರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಐದು ವರ್ಷಗಳಿಂದ ನನೆಗುದಿಗೆ ಬಿದ್ದಿರುವ 70 ಕೋಟಿ ರೂ.ಗೂ ಅಧಿಕ ವೆಚ್ಚದ ಕ್ಯಾನ್ಸರ್ ಆಸ್ಪತ್ರೆ ಪ್ರಾರಂಭಿಸದೆ ಅನಾಥ ಸ್ಥಿತಿಯಲ್ಲಿದೆ. ಇದು ಕ್ಯಾನ್ಸರ್ ರೋಗಿಗಳಿಗೆ ದೊಡ್ಡ ಮಾರಕವಾಗಿದೆ. ಚಿಕಿತ್ಸೆ ನೀಡಬೇಕಾದ ಜಿಲ್ಲಾ ಆಸ್ಪತ್ರೆಯು ಎಲ್ಲಾ ಸೌಲಭ್ಯವನ್ನು ಪಡೆದರೂ ಪ್ರಾರಂಭಿಸದೆ ನಿರ್ಲಕ್ಷೃ ಧೋರಣೆ ತಾಳಿರುವುದು ಏಕೆ ಎಂದು ಪ್ರಶ್ನಿಸಿದರು.
ಕ್ಯಾನ್ಸರ್ ರೋಗಿಗಳ ಕಷ್ಟವನ್ನು ನೋಡಿದರೆ ಕಣ್ಣೀರು ಬರುತ್ತದೆ. ರೋಗಿಗಳು ಅವರಿಗೆ ಬಂದಿರುವ ಕ್ಯಾನ್ಸರ್ ರೋಗವನ್ನು ಗುಣಪಡಿಸಿಕೊಳ್ಳಲು ಬೆಂಗಳೂರು-ಮೈಸೂರಿಗೆ ಅಲೆದಾಡಬೇಕಾದ ಸ್ಥಿತಿ ಬಂದೊದಗಿದೆ. 70 ಕೋಟಿ ರೂ. ಹೆಚ್ಚು ವೆಚ್ಚದ ಆಸ್ಪತ್ರೆಗೆ ಗ್ರಹಣ ಹಿಡಿದಂತಾಗಿದೆ ಎಂದು ಆರೋಪಿಸಿದರು.
ಕ್ಯಾನ್ಸರ್ ರೋಗಿಗಳಿಗೆ ಅನುಕೂಲವಾಗಲು ಅನುವು ಮಾಡಬೇಕು. ತಕ್ಷಣ ಕ್ಯಾನ್ಸರ್ ಆಸ್ಪತ್ರೆ ಪ್ರಾರಂಭಿಸಬೇಕು. ಜತೆಗೆ ಈ ಜಿಲ್ಲಾಸ್ಪತ್ರೆಯಲ್ಲಿ ಹೆರಿಗೆ ವಾರ್ಡ್ ಅವ್ಯವಸ್ಥೆಯಿಂದ ಕೂಡಿದೆ. ಬರುವ 4 ಜಿಲ್ಲೆಯ ಹೆರಿಗೆ ಮಹಿಳೆಯರಿಗೆ ಅನುಕೂಲವಾಗಲೆಂದು 24 ಕೋಟಿ ರೂ. ವೆಚ್ಚದ ಮಂಡ್ಯ ತಾಲೂಕಿನ ಬಿ.ಹೊಸೂರು ಕಾಲನಿಯಲ್ಲಿ ನಿರ್ಮಾಣವಾಗಿರುವ 100 ಹಾಸಿಗೆ ಹೆರಿಗೆ ವಾರ್ಡ್ ಆಸ್ಪತ್ರೆ ಕಾಮಗಾರಿ ಪೂರ್ಣಗೊಂಡು ಒಂದೂವರೆ ವರ್ಷವಾದರೂ ಪ್ರಾರಂಭಿಸದೆ ನಿರ್ಲಕ್ಷೃ ತೋರಲಾಗಿದೆ ಎಂದು ದೂರಿದರು.
ಮಿಮ್ಸ್‌ನ ಹೆರಿಗೆ ವಾರ್ಡಿನಲ್ಲಿ ಒಂದು ಬೆಡ್ ಮೇಲೆ ಮೂರು ಮಕ್ಕಳನ್ನು ಮಲಗಿಸುವ ವ್ಯವಸ್ಥೆ ಇದೆ. ವ್ಯವಸ್ಥಿತವಾಗಿ ನಿರ್ಮಾಣವಾಗಿರುವ ಆಸ್ಪತ್ರೆ ಏಕೆ ಉದ್ಘಾಟನೆಗೊಳ್ಳದೆ ಅನಾಥ ಸ್ಥಿತಿಯಲ್ಲಿದೆ. ತಕ್ಷಣ ಮಹಿಳಾ ವಾರ್ಡ್ ಆಸ್ಪತ್ರೆ ಉದ್ಘಾಟನೆಯನ್ನು ಒಂದು ತಿಂಗಳಲ್ಲಿ ಪ್ರಾರಂಭಿಸಬೇಕು ಎಂದು ಆಗ್ರಹಿಸಿದರು.
ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ್, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಸೌಭಾಗ್ಯ, ಮುಖಂಡರಾದ ಮಂಡಿಬೆಟ್ಟಳ್ಳಿ ಮಂಜುನಾಥ್, ಶಿವು, ಅರಕೆರೆ ರಘು, ಅಣ್ಣೂರು ರಾಘವೇಂದ್ರ, ಪವಿತ್ರಾ ನಾಗರಾಜ್, ಶಾಲಿನಿ, ಮಹಾಂತಪ್ಪ, ಸತೀಶ್, ಕುಮಾರ್, ಶಿವಲಿಂಗಪ್ಪ ಭಾಗವಹಿಸಿದ್ದರು.