

ಶಿರಹಟ್ಟಿ: ವಿದ್ಯಾರ್ಥಿನಿಯರ ಅನುಕೂಲಕ್ಕಾಗಿ ಪಟ್ಟಣದ ಹರಿಪುರದ ಸರ್ಕಾರಿ ಪದವಿ ಕಾಲೇಜು ಬಳಿ ನಿರ್ಮಿಸಲಾದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿನಿಯರ ಹಾಸ್ಟೆಲ್ ಕಟ್ಟಡ ಪೂರ್ಣಗೊಂಡರೂ ಇನ್ನೂ ಉದ್ಘಾಟನೆಯಾಗದ ಕಾರಣ ವಿದ್ಯಾರ್ಥಿನಿಯರು ವಸತಿ ಸೌಕರ್ಯದಿಂದ ವಂಚಿತರಾಗಿದ್ದಾರೆ. ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಎಬಿವಿಪಿ ವತಿಯಿಂದ ತಹಸೀಲ್ದಾರ್ ಸಂತೋಷ ಅಸ್ಕಿ ಅವರಿಗೆ ಮನವಿ ಸಲ್ಲಿಸಿದರು.
ಕಟ್ಟಡ ಸದ್ಬಳಕೆಯಾಗದ ಕಾರಣ ಕೆಲವರು ಧೂಮಪಾನ ಹಾಗೂ ಮದ್ಯಪಾನದ ಅಡ್ಡೆಯನ್ನಾಗಿ ಮಾಡಿಕೊಂಡಿದ್ದಾರೆ. ಅಧಿಕಾರಿಗಳು ಸ್ಥಳ ಪರಿಶೀಲಿಸಿ ಇಲ್ಲಿನ ಸಮಸ್ಯೆಗಳನ್ನು ಪರಿಹರಿಸಿ ವಿದ್ಯಾರ್ಥಿನಿಯರಿಗೆ ಅನುಕೂಲ ಮಾಡಿಕೊಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಪರಶುರಾಮ ಕಳ್ಳಿಮನಿ, ಅಭಿಷೇಕ ಉಮಚಗಿ, ಸತೀಶ ತಳವಾರ, ವಿನಾಯಕ ಹುಂಬಿ, ರಕ್ಷಿತಾ ಗಂಟಿ, ರಕ್ಷಿತಾ ಬೇಂದ್ರೆ, ರಕ್ಷಿತಾ ಬಾಲೆಹೊಸೂರ, ಅನುಷಾ ಅರೆಕಂಬಾರ, ಗೀತಾ ಹುಲ್ಲೂರ ಇತರರಿದ್ದರು.