

ಹುನಗುಂದ: ಆಲಮಟ್ಟಿ-ಚಿತ್ರದುರ್ಗ ಮತ್ತು ಕುಡಚಿ-ರಾಯಚೂರು ರೈಲು ಮಾರ್ಗಗಳನ್ನು ಜಾರಿಗೊಳಿಸುವಂತೆ ಕೇಂದ್ರ ರೈಲ್ವೆ ಸಚಿವರನ್ನು ಒತ್ತಾಯಿಸುವಂತೆ ಆಗ್ರಹಿಸಿ ನಾಗರಿಕ ಸೇವಾ ಸುಧಾರಣಾ ವೇದಿಕೆ ಹಾಗೂ ನವ ಕರ್ನಾಟಕ ರಾಜ್ಯ ರೈತ ಸಂಘದಿಂದ ಸೋಮವಾರ ಶಾಸಕ ವಿಜಯಾನಂದ ಕಾಶಪ್ಪನವರ ಅವರಿಗೆ ಮನವಿ ಸಲ್ಲಿಸಲಾಯಿತು.
ನಾಗರಿಕ ಸೇವಾ ಸುಧಾರಣಾ ವೇದಿಕೆಯ ಸದಸ್ಯ ಜಿ.ಬಿ. ಕಂಬಾಳಿಮಠ ಮಾತನಾಡಿ, ಕರ್ನಾಟಕದಲ್ಲಿ ರೈಲು ಮಾರ್ಗಗಳ ಕೊರತೆ ಸಾಕಷ್ಟಿದೆ. ಆದರಲ್ಲೂ ಉತ್ತರ ಕರ್ನಾಟಕದಲ್ಲಿ ಅನೇಕ ರೈಲು ಮಾರ್ಗಗಳ ಸರ್ವೇ ಕಾರ್ಯ ನಡೆದು ಕಾರ್ಯಗತಗೊಳ್ಳದೆ, ಈ ಭಾಗದ ಜನತೆಯ ಕನಸು ಕನಸಾಗಿಯೇ ಉಳಿದಿದೆ. ಕುಡಚಿ-ರಾಯಚೂರು ರೈಲು ಮಾರ್ಗವನ್ನು ಬಾಗಲಕೋಟೆ, ಹುನಗುಂದ, ಲಿಂಗಸೂರ ಮಾರ್ಗವಾಗಿ ರಾಯಚೂರುವರೆಗೂ ವಿಸ್ತರಿಸಬೇಕು. ಕೇವಲ 200 ಕಿ.ಮೀ ವಿಸ್ತರಣೆಯಿಂದ ಮಹಾರಾಷ್ಟ್ರ, ಕರ್ನಾಟಕ, ಆಂಧ್ರಪ್ರದೇಶ ರಾಜ್ಯಗಳಿಗೆ ಹೊಂದಿಕೊಳ್ಳುವ ಆಲಮಟ್ಟಿ-ಚಿತ್ರದುರ್ಗ ರೈಲು ಮಾರ್ಗವು ಉತ್ತರ ಭಾರತ ಮತ್ತು ದಕ್ಷಿಣ ಭಾರತ ರೈಲು ಮಾರ್ಗವಾಗಿ ಪರಿಣಮಿಸುತ್ತದೆ. ಈ ಮಾರ್ಗವು ಆಲಮಟ್ಟಿಯಿಂದ ಕೊಡಲಸಂಗಮ, ಹುನಗುಂದ, ಇಳಕಲ್ಲ, ಹೊಸಪೇಟೆ ಮಾರ್ಗವಾಗಿ ಚಿತ್ರದುರ್ಗವನ್ನು ಸಂಪರ್ಕಿಸುವುದರಿಂದ ಬಸವಣ್ಣನವರ ಐಕ್ಯ ಭೂಮಿ ಕೂಡಲ ಸಂಗಮ ಕ್ಷೇತ್ರ ಬೆಳೆಯಲು ಸಾಧ್ಯವಾಗುತ್ತದೆ ಎಂದರು.
ನವ ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಕೃಷ್ಣಾ ಜಾಲಿಹಾಳ ಮಾತನಾಡಿ, ಬ್ರಿಟಿಷರ ಕಾಲಾವಧಿಯಲ್ಲಿ ಸರ್ವೇಯಾಗಿ ಆಮೆಗತಿಯಲ್ಲಿ ಸಾಗುತ್ತಿರುವ ಕಾಮಗಾರಿಯನ್ನು ವೇಗಗೊಳಿಸಿ ಅದನ್ನು ವಿಸ್ತರಿಸಬೇಕು. ಅಲಮಟ್ಟಿಯಿಂದ ಕೂಡಲಸಂಗಮ, ಹುನಗುಂದ, ಇಳಕಲ್ಲ, ಕುಷ್ಟಗಿ,ಕೊಪ್ಪಳ ಹೊಸಪೇಟೆ ಮಾರ್ಗವಾಗಿ ಚಿತ್ರದುರ್ಗ ಸಂಪರ್ಕಿಸುವ ಆಲಮಟ್ಟಿ -ಚಿತ್ರದುರ್ಗ ರೈಲು ಮಾರ್ಗದ ಡಿಪಿಆರ್ ತಯಾರಿಸಿ, ಈ ವರ್ಷದ ಬಜೆಟ್‌ನಲ್ಲಿ ಅನುದಾನ ಕಾಯ್ದಿರಿಸಿ ಶೀಘ್ರವೇ ಕಾಮಗಾರಿ ಆರಂಭಿಸಬೇಕು ಎಂದು ತಿಳಿಸಿದರು.
ಕರವೇ ಅಧ್ಯಕ್ಷ ರೋಹಿತ ಬಾರಕೇರ, ಸಂಗಣ್ಣ ಆವಾರಿ ಇದ್ದರು.