ನಾಗಮೋಹನ್ ದಾಸ್ ವರದಿ ಅನುಷ್ಠಾನಕ್ಕೆ ಆಗ್ರಹ

Published on

ಮೈಸೂರು: ಒಳ ಮೀಸಲಾತಿ ಸಂಬಂಧ ನ್ಯಾಯಮೂರ್ತಿ ನಾಗಮೋಹನ್ ದಾಸ್ ಸಲ್ಲಿಸಿರುವ ವರದಿ ವೈಜ್ಞಾನಿಕವಾಗಿದ್ದು, ಯಾವುದೇ ಒತ್ತಡಕ್ಕೆ ಮಣಿಯದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನುಷ್ಠಾನಗೊಳಿಸಬೇಕು ಎಂದು ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿ ಒಕ್ಕೂಟದ ಸಂಚಾಲಕ ಅಂಬಣ್ಣ ಅರೋಳಿಕ್ಕರ್ ತಿಳಿಸಿದರು.

ವರದಿ ಜಾರಿಗೆ ಆಗ್ರಹಿಸಿ ಆ.11ರಂದು ನಮ್ಮ ಸಂಘಟನೆಯಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅನಿರ್ದಿಷ್ಟಾವಧಿ ಧರಣಿ ಆರಂಭಿಸಲಾಗುವುದು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಯಾವುದೇ ವೇತನ ಪಡೆಯದೆ ನಾಗಮೋಹನ್‌ದಾಸ್ ಅವರು ಸಂವಿಧಾನ ಬದ್ಧವಾಗಿ ಸಮೀಕ್ಷೆ ನಡೆಸಿದ್ದಾರೆ. ಪ್ರತಿ ವರದಿ ಬಂದಾಗಲೂ ಸಣ್ಣ ಪುಟ್ಟ ವಿರೋಧ ಇರುತ್ತದೆ. ಮುಖ್ಯಮಂತ್ರಿಗಳು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿಗೆ ಗೌರವ ನೀಡಿ ವರದಿ ಅನುಷ್ಠಾನಗೊಳಿಸಬೇಕು ಎಂದು ಆಗ್ರಹಿಸಿದರು.

ಕೆಲವು ಸಮುದಾಯಗಳು ವರದಿಯ ಬಗ್ಗೆ ಅಪಸ್ವರ ಎತ್ತಿವೆ. ನಾವು ಈ ಹಿಂದೆಯೇ ಮೀಸಲಾತಿಯ ಸಮಾನ ಹಂಚಿಕೆಗೆ ಸಮ್ಮತಿ ಸೂಚಿಸಿದ್ದರೂ ಕೆಲವರು ಒಪ್ಪಿರಲಿಲ್ಲ. ಈಗ ಎಲ್ಲರೂ ಸರ್ಕಾರದ ನಿರ್ಧಾರಕ್ಕೆ ಒಪ್ಪಿಗೆ ಸೂಚಿಸಬೇಕು ಎಂದರು.

ಒಳಮೀಸಲಾತಿಗಾಗಿ ಸಮುದಾಯ ಅನೇಕ ವರ್ಷದಿಂದ ಕಾದಿದೆ. ಇನ್ನೂ ವಿಳಂಬ ಧೋರಣೆ ಅನುಸರಿಸಿದರೆ ನಾವು ರಸ್ತೆಗಿಳಿದು ಹೋರಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಸಂಘಟನೆಯ ಪದಾಧಿಕಾರಿಗಳಾದ ಡಿ.ಟಿ.ವೆಂಕಟೇಶ್, ಸುಬ್ರಹ್ಮಣ್ಯ, ಚಂದ್ರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net