

ವಿಜಯವಾಣಿ ಸುದ್ದಿಜಾಲ ಧಾರವಾಡ
ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ, ನ್ಯಾಯಮೂರ್ತಿ ಎ.ಜೆ. ಸದಾಶಿವ ವರದಿಯನ್ನು ಶೀಘ್ರ ಅನುಷ್ಠಾನಗೊಳಸಬೇಕು ಎಂದು ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಜಾರಿ ಹೋರಾಟ ಸಮಿತಿ ಜಿಲ್ಲಾ ಘಟಕದ ಸದಸ್ಯ ಶಿವಸೋಮಣ್ಣ ನಿಟ್ಟೂರ ಒತ್ತಾಯಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಒಳಮೀಸಲಾತಿ ಜಾರಿಗೊಳಿಸುತ್ತೇವೆ ಎಂದು ಭರವಸೆ ನೀಡಿತ್ತು. ಕಾನೂನು ತೊಡಕು ನಿವಾರಣೆಯಾಗಿದ್ದರಿಂದ ಒಳ ಮೀಸಲಾತಿ ಜಾರಿಗೆ ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದರು.
ಮಾದಿಗ ಸಮಾಜವು ಶೈಕ್ಷಣಿಕ, ಆರ್ಥಿಕ , ರಾಜಕೀಯ, ಸಾಮಾಜಿಕವಾಗಿ ಹಿಂದುಳಿದ್ದು, ಒಳಮೀಸಲಾತಿಗಾಗಿ ಮೂರು ದಶಕಗಳಿಂದ ಹೋರಾಟ ಮಾಡುತ್ತಿದೆ. ಪರಿಶಿಷ್ಟ ಜಾತಿ ಮೀಸಲಾತಿಯಲ್ಲಿ ಒಳಮೀಸಲಾತಿ ಜಾರಿಗೊಳಿಸುವ ಅಧಿಕಾರ ರಾಜ್ಯ ಸರ್ಕಾರಗಳಿಗೆ ಇದೆ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದರೂ ಸರ್ಕಾರ ವಿಳಂಬ ಮಾಡುತ್ತಿದೆ ಎಂದು ದೂರಿದರು.
ಸರ್ಕಾರ ಒಳಮೀಸಲಾತಿ ಜಾರಿಗೊಳಿಸುವಲ್ಲಿ ನಿರ್ಲಕ್ಷ್ಯ ತೋರಿದರೆ ಮುಂದಿನ ದಿನಗಳಲ್ಲಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಸಿ.ಬಿ. ಹಾದಿಮನಿ, ಚಂದ್ರೇಶಖರ ನಡುವಿನಮನಿ, ಪುಂಡಲೀಕ ಮಾದರ, ನಿಂಗಪ್ಪ ಹಂಚಿನಾಳ, ತಿಪ್ಪಣ್ಣ ದಿಡ್ಡಮನಿ, ಮಂಜುನಾಥ ಹೊಸಮನಿ ಪಾಲ್ಗೊಂಡಿದ್ದರು.