

ತುಮಕೂರು: ಹಾಸನ ಜಿಲ್ಲೆಯಲ್ಲಿ 3-4 ದಿನಗಳಿಂದ ಭರ್ಜರಿ ಮಳೆಯಾಗುತ್ತಿರುವುದರಿಂದ ಹೇಮಾವತಿ ನದಿ ತುಂಬಿ ಹರಿಯುತ್ತಿದ್ದು, ಜಿಲ್ಲೆಗೆ ನೀರು ಹರಿಸಲು ಸರ್ಕಾರ ಮುಂದಾಗಬೇಕು ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಆಗ್ರಹಿಸಿದ್ದಾರೆ.
ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ನಿಯಮದಂತೆ ಹೇಮಾವತಿ ಜಲಾಶಯದಿಂದ ಈ ವರ್ಷದ ಪಾಲಿನ ನೀರನ್ನು ಮೇ 31ರವರೆಗೆ ಪಡೆಯಬಹುದಾಗಿತ್ತು. ಆದರೆ, ಹಾಸನ, ಮಂಡ್ಯ ಜಿಲ್ಲಾ ಜನಪ್ರತಿನಿಧಿಗಳ ಕ್ಯಾತೆಯಿಂದ 6-7 ಟಿಎಂಸಿ ನೀರು ಖೋತಾ ಆಗಿತ್ತು. ಈಗಲಾದರೂ ಜಿಲ್ಲಾಡಳಿತವು ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟು ಮಳೆಗಾಲದಲ್ಲೇ ಹೇಮೆ ಹರಿಸಲು ಕ್ರಮವಹಿಸುವಂತೆ ಗುರುವಾರ ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್ ಅವರನ್ನು ಒತ್ತಾಯಿಸಿದ್ದಾರೆ.
ಡಿಸಿ ಕಚೇರಿಗೆ ಬೀಗ: ಜಲಾಶಯದಲ್ಲಿ 24 ಟಿಎಂಸಿ ನೀರಿದ್ದು ಮಳೆ ಸುರಿಯುತ್ತಿರುವಾಗಲೇ ನೀರು ಹರಿಸಿಕೊಂಡರೆ ಜಿಲ್ಲೆಯ ಕೆರೆ-ಕಟ್ಟೆಗಳನ್ನು ತುಂಬಿಸಿಕೊಳ್ಳಲು ಸಾಧ್ಯವಾಗಲಿದೆ. ಸರ್ಕಾರದ ಗಮನಕ್ಕೆ ತಂದು ನೀರು ಹರಿಸಲು ಮುಂದಾಗಬೇಕು ಇಲ್ಲದಿದ್ದರೆ ಡಿಸಿ ಕಚೇರಿಗೆ ಬೀಗ ಜಡಿದು ಹೋರಾಟ ಮಾಡುವುದಾಗಿ ಸೊಗಡು ಎಚ್ಚರಿಸಿದ್ದಾರೆ.
ಸರ್ಕಾರದ ಗಮನಕ್ಕೆ ತರಲಾಗಿದೆ. ಈ ವರ್ಷದ ಕೋಟಾದಡಿ ನೀರು ಪಡೆಯಲು ಜೂನ್ ಆರಂಭದಲ್ಲಿ ನೀರು ಹರಿಸಲು ಕ್ರಮಕೈಗೊಳ್ಳಲಾಗಿತ್ತು. ಆದರೆ, ಕಾನೂನು ಅಡ್ಡಿ ಬಂದಿದ್ದರಿಂದ ಸಾಧ್ಯವಾಗಲಿಲ್ಲ. ಸಮುದ್ರಪಾಲಾಗುತ್ತಿರುವ ಹೇಮೆ ‘ಪ್ರವಾಹ’ ನೀರನ್ನು ಪಡೆಯಲು ಸೂಕ್ತ ಸಮಯವಾಗಿದ್ದು ಸರ್ಕಾರ ಹಾಗೂ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಅಧಿಕಾರಿಗಳ ಗಮನಕ್ಕೆ ತಂದು ಜಿಲ್ಲೆಯ ಪಾಲಿನ ನೀರು ಪಡೆಯಲು ಆದ್ಯತೆ ಕೊಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್ ಭರವಸೆಯಿತ್ತಿದ್ದಾರೆ.
ಸೋಮವಾರ ಐಸಿಸಿ ಸಭೆ : ಹೇಮೆ ಯೋಜನೆಯಲ್ಲಿ ಜಿಲ್ಲೆಗೆ 25.3 ಟಿಎಂಸಿ ನೀರು ಮಂಜೂರಾಗಿದ್ದು ಕಳೆದ ಆಗಸ್ಟ್‌ನಿಂದ ಈ ವರ್ಷ ಜನವರಿ 22ರವರೆಗೆ 2 ಹಂತಗಳಲ್ಲಿ ನೀರು ಹರಿಸಲಾಗಿದೆ. ಈವರೆಗೆ 17 ರಿಂದ 18 ಟಿಎಂಸಿ ನೀರು ಮಾತ್ರ ಜಿಲ್ಲೆಗೆ ಹರಿದಿದ್ದು ಉಳಿದ 7 ಟಿಂಎಂಸಿ ನೀರನ್ನು ಬೇಸಿಗೆ ಸಂದರ್ಭದಲ್ಲಿ ಬಳಸಿಕೊಳ್ಳಲು ನಿರ್ಧರಿಸಲಾಗಿತ್ತು. ಮೇ 31ಕ್ಕೆ ಈ ವರ್ಷದ ಕೋಟಾ ಮುಗಿದಿದೆ. ಹಾಗಾಗಿ, ಮುಂದಿನ ವರ್ಷದ ಕೋಟಾದಡಿ ಹೇಮೆ ನೀರು ಹರಿಸುವ ಹಿನ್ನೆಲೆಯಲ್ಲಿ ಸೋಮವಾರ ನೀರಾವರಿ ಸಲಹಾ ಸಮಿತಿ ಸಭೆಯನ್ನು ಬೆಂಗಳೂರಿನಲ್ಲಿ ಕರೆಯಲಾಗಿದ್ದು ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಅವರು ಹಾಸನ, ಮಂಡ್ಯ ಜನಪ್ರತಿನಿಧಿಗಳ ಪ್ರಭಾವಕ್ಕೆ ಒಳಗಾಗದೆ ನೀರು ಹರಿಸಬೇಕಿದೆ.
3 ದಿನದಲ್ಲಿ ಡ್ಯಾಂ ಭರ್ತಿ ! :ಹೇಮಾವತಿ ಜಲಾಶಯವು ಮೂರೇ ದಿನದಲ್ಲಿ ಭರ್ತಿಯಾಗಲಿದೆ. 36 ಸಾವಿರ ಕ್ಯೂಸೆಕ್ ಒಳಹರಿವು ಇದ್ದು ನದಿ ಪ್ರಾಂತ್ಯದಲ್ಲಿ ಉತ್ತಮ ಮಳೆಯಾಗುತ್ತಿದೆ. ಜಲಾಶಯದ ಸಾಮರ್ಥ್ಯ 37.103 ಟಿಎಂಸಿ ಇದ್ದು ಗುರುವಾರ 23.97 ಟಿಎಂಸಿ ನೀರಿದೆ.
ಸಿಎಂ ಯಡಿಯೂರಪ್ಪ ಅನಾರೋಗ್ಯದ ನಡುವೆ ಜಲಪ್ರಳಯಕ್ಕೆ ತಕ್ಷಣ ಸ್ಪಂದಿಸಿ ಕ್ರಮವಹಿಸಲು ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಈಗಲಾದರೂ ಎಲ್ಲ ಜಿಲ್ಲಾ ಉಸ್ತುವಾರಿ ಸಚಿವರು ಸಿಎಂ ವೇಗಕ್ಕೆ ತಕ್ಕಂತೆ ಕೆಲಸ ಮಾಡಬೇಕಿದೆ. ಹೇಮೆ ನೀರು ಹರಿಸಿ ಜಿಲ್ಲೆಯ ಕೆರೆ-ಕಟ್ಟೆಗಳನ್ನು ತುಂಬಿಸಿಕೊಳ್ಳಲು ಕ್ರಮವಹಿಸಬೇಕು. ಸೊಗಡು ಶಿವಣ್ಣ ಮಾಜಿ ಸಚಿವ