ಮೈಸೂರು: ರಾಜ್ಯದಲ್ಲಿ 15 ಲಕ್ಷ ಜನಸಂಖ್ಯೆ ಹೊಂದಿರುವ ಕುಂಬಾರ ಸಮುದಾಯದ ಅಭಿವೃದ್ಧಿಗೆ ಬಜೆಟ್‌ನಲ್ಲಿ ವಿಶೇಷ ಅನುದಾನ ಮೀಸಲಿಡಬೇಕು ಎಂದು ಕುಲಾಲಗುಂಡ ಬ್ರಹ್ಮಾರ್ಯ ಕುಂಬಾರರ ಸಂಘದ ಪದಾಧಿಕಾರಿ ಡಾ.ಎಂ.ಪಿ.ವರ್ಷ ಅವರು ಮುಖ್ಯಮಂತ್ರಿಗೆ ಮನವಿ ಮಾಡಿದ್ದಾರೆ.
ಎಲ್ಲ ಕ್ಷೇತ್ರಗಳಲ್ಲಿಯೂ ಸಮುದಾಯ ತೀರಾ ಹಿಂದುಳಿದಿದೆ. ಸಾಂವಿಧಾನಿಕವಾಗಿ ದೊರಕಬೇಕಾಗಿದ್ದ ಯಾವುದೇ ಸೌಲಭ್ಯ ದೊರೆತಿಲ್ಲ. ಕುಂಬಾರರ ಅಭಿವೃದ್ಧಿ ನಿಗಮಕ್ಕಾಗಿ 50 ವರ್ಷದಿಂದಲೂ ಹೋರಾಟ ಮಾಡಿರುವ ಫಲವಾಗಿ 2010 ರಲ್ಲಿ ಬಿಜೆಪಿ ಸರ್ಕಾರ ಬೇಡಿಕೆ ಈಡೇರಿಸುವ ಭರವಸೆಯೊಡನೆ ನಿಗಮ ರಚಿಸಿತ್ತು. ಆದರೆ ಅದನ್ನು ಕುಂಭಕಲಾ ಅಭಿವೃದ್ಧಿ ಮಂಡಳಿಯಾಗಿ ಪರಿವರ್ತಿಸಿದ ಕಾರಣ ಸಮುದಾಯದ ಕೇವಲ ಶೇ. ಐದರಷ್ಟು ಜನರಿಗೆ ಸೌಲಭ್ಯ ದೊರಕುವಂತಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಹೀಗಾಗಿ ರಾಜ್ಯ ಸರ್ಕಾರ ಘೋಷಿಸಿರುವ ಕರ್ನಾಟಕ ರಾಜ್ಯ ಕುಂಬಾರ ಸಮುದಾಯದ ಅಭಿವೃದ್ಧಿ ನಿಗಮಕ್ಕೆ ಅಗತ್ಯ ಕ್ರಮ ಕೈಗೊಂಡು ಶಾಸನ ರೂಪಿಸಬೇಕು. ಇದಕ್ಕೆ ಕನಿಷ್ಠ ನೂರು ಕೋಟಿ ರೂ. ಅನುದಾನ ಒದಗಿಸಬೇಕು. ಜನಪರ ಕಾಳಜಿಯುಳ್ಳ ಕುಂಬಾರ ಸಮುದಾಯದವರನ್ನು ಅಧ್ಯಕ್ಷರು, ಸದಸ್ಯರನ್ನಾಗಿ ನಿಯೋಜಿಸಬೇಕು ಎಂದು ಕೋರಿದರು.
ಸಂಘದ ಅಧ್ಯಕ್ಷ ಎಚ್.ಎಸ್.ಪ್ರಕಾಶ್, ಪ್ರಧಾನ ಕಾರ್ಯದರ್ಶಿ ಕೆ.ಆರ್.ಸೋಮಶೇಖರ್, ಮುಖಂಡರಾದ ವಿ.ಚಂದ್ರಶೇಖರ್, ಕೆ. ಸೋಮಶೇಖರ್ ಇದ್ದರು.