ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ

oppo_2
ವಿವಿಧ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ ರೈತ ಸಂಘದ ಪದಾಧಿಕಾರಿಗಳು ಸೂಳೇರಿಪಾಳ್ಯ ಗ್ರಾಪಂ ಮುಂಭಾಗ ಪ್ರತಿಭಟನೆ ನಡೆಸಿದರು.
Published on

ಹನೂರು: ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಸೂಳೇರಿಪಾಳ್ಯ ಗ್ರಾಮ ಪಂಚಾಯಿತಿ ಕಚೇರಿ ಮುಂಭಾಗ ರೈತ ಸಂಘದ ಪದಾಧಿಕಾರಿಗಳು ಗುರುವಾರ ಪ್ರತಿಭಟನೆ ನಡೆಸಿದರು.
ಗ್ರಾಮದ ಮುಖ್ಯ ರಸ್ತೆಯಿಂದ ಹೊರಟ ಪ್ರತಿಭಟಮಾಕಾರರು ಘೋಷಣೆ ಕೂಗುತ್ತಾ ಗ್ರಾಪಂ ಕಚೇರಿ ಮುಂಭಾಗ ಆಗಮಿಸಿ ಆಕ್ರೋಶ ವ್ಯಕ್ತಪಡಿಸಿದರು.
ಸಂಘದ ಜಿಲ್ಲಾ ಉಪಾಧ್ಯಕ್ಷ ಗೌಡೇಗೌಡ ಮಾತನಾಡಿ, ಗ್ರಾಪಂ ವ್ಯಾಪ್ತಿಯ ಬಸಪ್ಪನದೊಡ್ಡಿ, ಕೆ. ಗುಂಡಾಪುರ, ಕಾಂಚಳ್ಳಿ, ಪಚ್ಚೆದೊಡ್ಡಿ ಹಾಗೂ ಗಂಗನದೊಡ್ಡಿ ಗ್ರಾಮದ ಬಡಾವಣೆಯ ರಸ್ತೆಗಳು, ಜಮೀನಿಗೆ ತೆರಳುವ ರಸ್ತೆ ತುಂಬ ಹದಗೆಟ್ಟಿದೆ. ಗ್ರಾಮದ ಕೆಲವು ಬಡಾವಣೆಯಲ್ಲಿ ಚರಂಡಿ ಇಲ್ಲದ ಪರಿಣಾಮ ಕೊಳಚೆ ನೀರು ಬೀದಿಯಲ್ಲಿ ಹರಿಯುತ್ತಿದ್ದು, ರೋಗ-ರುಜಿನಗಳ ಭೀತಿ ಜನರನ್ನು ಆವರಿಸಿದೆ. ಆದ್ದರಿಂದ ನರೇಗಾ ಯೋಜನೆಯಡಿ ಸಿಸಿ ರಸ್ತೆ ನಿರ್ಮಿಸಿಕೊಡಬೇಕು. ಘನ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆ ಮಾಡಲಾಗಿದೆ ಅಷ್ಟೇ. ಆದರೆ ಕಾರ್ಯ ರೂಪಗೊಂಡಿಲ್ಲ. ಕಸ ವಿಲೇವಾರಿ ವಾಹನ ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ ಎಂದು ದೂರಿದರು.
ಸುಮಾರು 10 ಸಾವಿರ ಜನಸಂಖ್ಯೆ ಹೊಂದಿರುವ ಈ ಭಾಗದಲ್ಲಿ ಆಂಬುಲೆನ್ಸ್ ಇಲ್ಲ. ಗಂಗನದೊಡ್ಡಿ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಸ್ಥಾಪಿಸಿ 2 ವರ್ಷ ಕಳೆದಿದೆ. ಆದರೆ ಉದ್ಘಾಟನೆಗೊಂಡಿಲ್ಲ. ಇನ್ನು ಅಂತರ್ಜಲ ಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೆರೆ, ಕಟ್ಟೆಗಳನ್ನು ಅಭಿವೃದ್ಧಿಪಡಿಸಿ ರೈತರಿಗೆ ಅನುಕೂಲ ಕಲ್ಪಿಸಬೇಕು. ನಿಗದಿತ ಅವಧಿಯೊಳಗೆ ಇ-ಸ್ವತ್ತು ನೀಡಬೇಕು. ಗ್ರಾಪಂ ವತಿಯಿಂದ ಸಿಗುವ ಸವಲತ್ತುಗಳ ಬಗ್ಗೆ ಸೂಚನಾ ಫಲಕದಲ್ಲಿ ಅಳವಡಿಸಬೇಕು. ಇನ್ನು ಮಳೆಗಾಲದ ವೇಳೆ ಕಾತಾಳಿ ಕೆರೆಯ ನೀರು ಜಮೀನಿಗೆ ನುಗ್ಗಿ ಫಸಲು ನಾಶವಾಗುತ್ತಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಅಗತ್ಯ ಕ್ರಮವಹಿಸಿ ಬಗೆಹರಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ತಾಲೂಕು ಪಂಚಾಯಿತಿ ಕಚೇರಿ ಮುಂಭಾಗ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪಿಡಿಒ ಮಾದೇಶ್ ಮನವಿ ಸ್ವೀಕರಿಸಿ ಮಾತನಾಡಿ, ಇತ್ತೀಚಿಗಷ್ಟೇ ಅಧಿಕಾರ ವಹಿಸಿಕೊಳ್ಳಲಾಗಿದೆ. ಆದ್ದರಿಂದ ಈ ಬಗ್ಗೆ ಗಮನಹರಿಸಿ ಗ್ರಾಪಂ ಮಟ್ಟದಲ್ಲಿ ಆಗಬಹುದಾದ ಸಮಸ್ಯೆಗಳನ್ನು ಬಗೆಹರಿಸಲು ಕ್ರಮವಹಿಸಲಾಗುವುದು. ಇನ್ನುಳಿದ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಆಯಾ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು. ಆದ್ದರಿಂದ ತಮ್ಮೆಲ್ಲರ ಸಹಕಾರ ಅಗತ್ಯ ಎಂದು ತಿಳಿಸಿದ ಬಳಿಕ ಪ್ರತಿಭಟನೆಯನ್ನು ಕೈಬಿಡಲಾಯಿತು. ಸಂಘದ ತಾಲೂಕು ಅಧ್ಯಕ್ಷ ಅಮ್ಜದ್‌ಖಾನ್, ಮಹಿಳಾ ಘಟಕದ ಅಧ್ಯಕ್ಷೆ ರಾಜಮಣಿ, ಕಾರ್ಯದರ್ಶಿ ಗೋಪಾಲ್, ಪದಾಧಿಕಾರಿಗಳಾದ ಬಸವರಾಜು, ವೆಂಕಟಾಚಲ, ನಾರಾಯಣ, ಅರ್ಪುದರಾಜ್, ಸೋಮಣ್ಣ, ಮುರುಗೇಶ್ ಹಾಗೂ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net