

ಗುಂಡ್ಲುಪೇಟೆ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಗ್ರಾಮಪಂಚಾಯಿತಿ ನೌಕರರ ಸಂಘ ವತಿಯಿಂದ ಬುಧವಾರ ಪ್ರತಿಭಟನೆ ನಡೆಯಿತು.
ಸಂಘದ ಜಿಲ್ಲಾ ಉಪಾಧ್ಯಕ್ಷ ಚಿಕ್ಕತುಪ್ಪ್ಪೂರು ಮಲ್ಲು ನೇತೃತ್ವದಲ್ಲಿ ಪಟ್ಟಣದ ಪ್ರವಾಸಿ ಮಂದಿರದ ಬಳಿ ಸಮಾವೇಶಗೊಂಡ ಪ್ರತಿಭಟನಾಕಾರರು, ಕಾರ್ಮಿಕ ವಿರೋಧಿ ನೀತಿ ಕೈಬಿಡುವುದು, ಕನಿಷ್ಠ ವೇತನ ನಿಗದಿ ಸೇರಿದಂತೆ ನಾನಾ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಘೋಷಣೆ ಕೂಗಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿದರು. ತಾಲೂಕು ಕಚೇರಿ ಸಮೀಪ ಮಾನವ ಸರಪಳಿ ರಚಿಸಿ ಪ್ರತಿಭಟನೆ ನಡೆಸಿದರು.
ನಂತರ ತಾಲೂಕು ಪಂಚಾಯತಿ ಅಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಂಘದ ತಾಲೂಕು ಅಧ್ಯಕ್ಷ ರಾಜಪ್ಪ, ಉಪಾಧ್ಯಕ್ಷ ಲೋಕೇಶ, ಪ್ರಧಾನ ಕಾರ್ಯದರ್ಶಿ ಅಣ್ಣೂರು ಸಿದ್ದರಾಜು, ತೆರಕಣಾಂಬಿ ಮಂಜು, ಲೋಕೇಶ ಸಿದ್ದಯ್ಯ, ಸಂಪತ್ತು, ಮಾದೇಗೌಡ, ಮಾದೇವಮ್ಮ, ಮಂಜುಳಾ, ಶಿವಮ್ಮ ಚಿನ್ನರಾಜು, ಶಿವಶಂಕರ, ನಾಗರಾಜು ಇತರರು ಇದ್ದರು.