ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ

ಅರಕಲಗೂಡಿನಲ್ಲಿ ಸೋಮವಾರ ತಾಲೂಕು ಪರವಾನಗಿ ಭೂ ಮಾಪಕರು ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅನಿರ್ಧಿಷ್ಟಾವಧಿ ಮುಷ್ಕರ ಆರಂಭಿಸಿದರು. ತುಳಸಿರಾಮ್, ಕೆ.ಜೆ.ಕುಮಾರ್, ಬಿ.ಜೆ.ಶಿವರಾಜ್, ವಿನೋದ್, ಅಭಿಜಿತ್ ಇತರರು ಇದ್ದರು.
ಅರಕಲಗೂಡಿನಲ್ಲಿ ಸೋಮವಾರ ತಾಲೂಕು ಪರವಾನಗಿ ಭೂ ಮಾಪಕರು ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅನಿರ್ಧಿಷ್ಟಾವಧಿ ಮುಷ್ಕರ ಆರಂಭಿಸಿದರು. ತುಳಸಿರಾಮ್, ಕೆ.ಜೆ.ಕುಮಾರ್, ಬಿ.ಜೆ.ಶಿವರಾಜ್, ವಿನೋದ್, ಅಭಿಜಿತ್ ಇತರರು ಇದ್ದರು.
Published on

ಅರಕಲಗೂಡು: ಸಮಾನ ಕೆಲಸಕ್ಕೆ ಸಮಾನ ವೇತನ ನೀಡಿ ತಮ್ಮ ಸೇವೆ ಕಾಯಂಗೊಳಿಸಬೇಕು ಎಂದು ಆಗ್ರಹಿಸಿ ತಾಲೂಕು ಪರವಾನಗಿ ಭೂಮಾಪಕರು ಲಾಗಿನ್ ನಿಷ್ಕ್ರೀಯಗೊಳಿಸಿ ಕೆಲಸ ಸ್ಥಗಿತಗೊಳಿಸಿ ಸೋಮವಾರ ಪಟ್ಟಣದಲ್ಲಿ ಅನಿರ್ಧಿಷ್ಟಾವಧಿ ಮುಷ್ಕರ ಆರಂಭಿಸಿದರು.

ಪಟ್ಟಣದ ಮಿನಿ ವಿಧಾನಸೌಧದ ಸರ್ಕಾರಿ ಭೂ ಮಾಪಕರ ಕಚೇರಿ ಆವರಣದಲ್ಲಿ ಧರಣಿ ಕುಳಿತ ಭೂಮಾಪಕರು ಸರ್ಕಾರ ತಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.

ಅಖಿಲ ಕರ್ನಾಟಕ ಸರ್ಕಾರಿ ಪರವಾನಗಿ ಭೂಮಾಪಕರ ಸಂಘದ ರಾಜ್ಯ ಸಮಿತಿ ಸದಸ್ಯ ವಿ.ಹೇಮಂತ್‌ಕುಮಾರ್ ಮಾತನಾಡಿ, ಎಲ್ಲ ಪರವಾನಗಿ ಭೂ ಮಾಪಕರು ಕಳೆದ 25 ವರ್ಷಗಳಿಂದ ಕಡಿಮೆ ವೇತನಕ್ಕೆ ದುಡಿಯುತ್ತಿದ್ದರೂ ಸಮಾನ ವೇತನ ಒದಗಿಸಿ ಸೇವೆ ಕಾಯಂಗೊಳಿಸದೆ ಸರ್ಕಾರ ನಮ್ಮ ಬೇಡಿಕೆಗಳನ್ನು ಕಡೆಗಣಿಸಿದೆ. ತಕರಾರು, ಕೋರ್ಟ್ ಆದೇಶ ಪ್ರಕರಣ, ಪೋಡಿಮುಕ್ತ, ಆಕಾರಬಂದ್, ಡಿಜಿಟೈಜೇಶನ್, ದರ್ಖಾಸ್ತು ಪೋಡಿ, ಸ್ವಮಿತ್ತ ಮತ್ತಿತರ ಪ್ರಕರಣಗಳನ್ನು ಒಳಗೊಂಡಂತೆ ನಮಗೆ ಇದುವರೆಗೂ ಸಮಯಕ್ಕೆ ಸರಿಯಾಗಿ ಸರಿಯಾದ ವೇತನ ಆಗಿಲ್ಲ. ತಂತ್ರಾಂಶದಲ್ಲಿ ವಿಲೇ ಪ್ರಕರಣಗಳಿಗೆ ಸಂಭಾವನೆಯಲ್ಲಿ ತಾರತಮ್ಯ ಮಾಡಲಾಗಿದೆ. ಲಾಗಿನ್ ಅಲ್ಲದೆ ಇತರೆ ಕೆಲಸಗಳನ್ನು ವಹಿಸಲಾಗಿದೆ. ಇಂತಹ ಹಲವು ಸಮಸ್ಯೆಗಳ ನಡುವೆಯೂ ಕೆಲಸ ನಿರ್ವಹಿಸುತ್ತಿದ್ದರೂ ಸರ್ಕಾರ ಮಾತ್ರ ಸ್ಪಂದಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಭೂ ಮಾಪಕರು ಅಳತೆಗೆ ಹೋದಾಗ ಆಗುವ ಅನಾಹುತ ಗಲಾಟೆ, ಕೋರ್ಟ್ ಪ್ರಕರಣ ಯಾವುದಕ್ಕೂ ನಮಗೆ ಭದ್ರತೆ ಇಲ್ಲ. ಪರವಾನಗಿ ಭೂಮಾಪಕರನ್ನು ವಿಶೇಷ ನೇಮಕಾತಿಯಡಿ ಸರ್ಕಾರಿ ಭೂ ಮಾಪಕರಾಗಿ ಕಾಯಂಗೊಳಿಸಿ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಿ ತಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವ ತನಕ ಮುಷ್ಕರ ಮುಂದುವರಿಯಲಿದೆ ಎಂದು ಹೇಳಿದರು.

ಸರ್ಕಾರಿ ಭೂ ಮಾಪನ ಇಲಾಖೆ ಸಹಾಯಕ ನಿರ್ದೇಶಕ ಸುಂದರ್ ಅವರಿಗೆ ಮನವಿ ಸಲ್ಲಿಸಲಾಯಿತು. ಪರವಾನಗಿ ಭೂ ಮಾಪಕರ ಸಂಘದ ತಾಲೂಕು ಅಧ್ಯಕ್ಷ ತುಳಸಿರಾಮ್, ಉಪಾಧ್ಯಕ್ಷ ಕೆ.ಜೆ. ಕುಮಾರ್, ಸದಸ್ಯರಾದ ಬಿ.ಜೆ. ಶಿವರಾಜ್, ವಿನೋದ್, ಅಭಿಜಿತ್, ಮೋನಿಕ, ಗೌತಮ್, ಆದರ್ಶ, ಚೇತನ್, ಲೋಹಿತ್, ಯೋಗೇಶ್, ಶ್ರೀನಿವಾಸ್, ಎಲ್.ಬಿ. ಕುಮಾರ್, ಸತೀಶ್, ದೇವರಾಜು, ರವೀಂದ್ರ, ಶ್ರೀಧರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net