

ವಿಜಯಪುರ: ನಗರದ ಸಂಚಾರ ವ್ಯವಸ್ಥೆ ಸುಧಾರಣೆ, ಉದ್ಯಾನವನಗಳ ವ್ಯವಸ್ಥಿತ ನಿರ್ವಹಣೆ, ಸೌಂದಯೀರ್ಕರಣಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ವಿಶೇಷ ಕಾರ್ಯಕ್ರಮಗಳನ್ನು ತ್ವರಿತವಾಗಿ ಅನುಷ್ಠಾನಗೊಳಿಸಬೇಕು ಎಂದು ಒತ್ತಾಯಿಸಿ ಉತ್ತರ ಕರ್ನಾಟಕ ಪ್ರಯಾಣಿಕರ ೇಮಾಭಿವೃದ್ಧಿ ಮಂಡಳಿ ವತಿಯಿಂದ ಇತ್ತೀಚೆಗೆ ಜಿಲ್ಲೆಗೆ ಭೇಟಿ ನೀಡಿದ್ದ ಸಚಿವ ಬೈರತಿ ಸುರೇಶ ಅವರಿಗೆ ಮನವಿ ಸಲ್ಲಿಸಲಾಯಿತು.
ಮಂಡಳಿ ಅಧ್ಯಕ್ಷ, ನ್ಯಾಯವಾದಿ ಶ್ರೀಶೈಲಪ್ಪ ಸಜ್ಜನ ಮಾತನಾಡಿ, ನಗರದಲ್ಲಿ ಹಲವು ಉದ್ಯಾನವನಗಳಿಗೆ ಮರುಜೀವ ನೀಡಬೇಕಿದೆ. ಸಕಲ ಸೌಲಭ್ಯಗಳನ್ನು ಕಲ್ಪಿಸಬೇಕಾಗಿರುವುದು ಅಗತ್ಯವಾಗಿದೆ. ಬಹುಮುಖ್ಯವಾಗಿ ಉದ್ಯಾನವನದಲ್ಲಿ ಓಪನ್ ಜಿಮ್ ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡಬೇಕಾಗಿರುವುದು ಅತ್ಯಗತ್ಯ. ನಿರ್ವಹಣೆ ಕೊರತೆಯಿಂದ ಈ ಸಲಕರಣೆಗಳು ಹಾಳಾಗುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಕನಕದಾಸ ಬಡಾವಣೆಯಲ್ಲಿ ಬಡಾವಣೆಯ ಖಾಸಗಿ ವ್ಯಕ್ತಿಗಳು ಸೇರಿ ನಿರ್ಮಿಸಿರುವ ಉದ್ಯಾನವನವಿದ್ದು, ಅಲ್ಲಿ ಹಲವು ಔಷಧಿಯ ಗುಣಗಳಿರುವ ಸಸ್ಯಗಳೂ ಅಧಿಕವಿದೆ. ಕೂಡಲೇ ಈ ಸ್ಥಳಕ್ಕೆ ಪಾಲಿಕೆ ಆಯುಕ್ತರು, ವಿಡಿಎ ಅಧಿಕಾರಿಗಳು ಭೇಟಿ ನೀಡಿ ಈ ಉದ್ಯಾನವನಕ್ಕೆ ಹೊಸ ಸ್ಪರ್ಶ ನೀಡಿದರೆ ಸಾರ್ವಜನಿಕರಿಗೆ ಅತ್ಯಂತ ಅನುಕೂಲವಾಗಲಿದೆ ಎಂದು ಅವರು ಮನವಿ ಮಾಡಿದರು.
ನಗರದಲ್ಲಿ ಜನ ಸಂಚಾರ ಹಾಗೂ ವಾಹನ ದಟ್ಟಣೆ ಅಧಿಕವಾಗಿದೆ. ಅದಕ್ಕೆ ತಕ್ಕಂತೆ ರಸ್ತೆಗಳ ನಿರ್ಮಾಣ, ಮೇಲ್ಸೆತುವೆ ನಿರ್ಮಿಸಿ ಹಾಗೂ ರೈಲ್ವೇ ಹಳಿ ಇರುವ ಕಡೆ ಅಂಡರ್ ಪಾಸ್ ನಿರ್ಮಾಣ ಅತ್ಯಂತ ಅಗತ್ಯವಾಗಿದೆ. ಈ ಕ್ರಮಗಳಿಂದ ಮಾತ್ರ ನಗರದ ನಾಗರಿಕರು ಅತೀ ಕಡಿಮೆ ಸಮಯದಲ್ಲಿ ಮತ್ತು ಇಂಧನ ಉಳಿತಾಯದಿಂದ ನಗರದಲ್ಲಿ ಸಂಚರಿಸಲು ಅನುಕೂಲವಾಗಲಿದ್ದು, ಜಲನಗರದ ಐನಾಪೂರ ಕ್ರಾಸ್ದಿಂದ ರೈಲ್ವೆ ಹಳಿ ಕೆಳಗಡೆ ಅಂಡರ್ ಪಾಸ್ ನಿರ್ಮಿಸಿ ವಜ್ರ ಹನುಮಾನ, ಗಣೇಶನಗರ, ಸಾಯಿ ಪಾರ್ಕ್, ಶಾರದಾ ಆ್ಯಕ್ಟ್ ಶಾಲೆ ಸುತ್ತಮುತ್ತಲಿನ ಪ್ರದೇಶಕ್ಕೆ ಸಂಚರಿಸಲು ಅನುವು ಮಾಡಿದರೆ ಸಮಯದ ಜತೆಗೆ ಇಂಧನ ಉಳಿತಾಯವಾಗುತ್ತದೆ ಎಂದು ತಿಳಿಸಿದರು.
ಕನಕದಾಸ ಬಡಾವಣೆಯ ಪಿಎನ್ಟಿ ಕ್ವಾರ್ಟಸ್ನಿಂದ ಸೋಲಾಪೂರ&ಬೆಂಗಳೂರು ಹೆದ್ದಾರಿ ಕೂಡಲು ಜಾಗೆಯಲ್ಲಿ ಸೇತುವೆ ನಿರ್ಮಿಸುವುದು ಅವಶ್ಯಕವಾಗಿದೆ. ಕೇಂದ್ರ ರೈಲ್ವೆ ನಿಲ್ದಾಣದಿಂದ ಸೋಲಾಪೂರ ಕಡೆಗೆ ಹೋಗುವ ರೈಲ್ವೆ ಹಳಿ ಕೆಳಗೆ ಅಂಡರ್ ಪಾಸ್ ನಿರ್ಮಿಸಿ ಸದ್ಯಕ್ಕೆ ಇರುವ ಔದ್ಯೋಗಿಕ ನಗರ, ಹೋಲ್ಸೇಲ್ ಕಿರಾಣಿ ಮಾರ್ಕೆಟ್, ಗ್ರಾಮೋದ್ಯೋಗ ಸಂಕೀರ್ಣ, ಸ್ಪಿನ್ನಿಂಗ್ ಮಿಲ್, ಹಮಾಲ ಕಾಲೋನಿ ವಿಮಾನ ನಿಲ್ದಾಣಕ್ಕೆ ತಲುಪಲು ಕಡಿಮೆ ಅವಧಿಯಲ್ಲಿ ಸಾಧ್ಯವಾಗುತ್ತದೆ ಎಂದರು.
ಅಥಣಿ ರಸ್ತೆಯ ಮೂಲಕ ಕಲಬುರಗಿ ರಸ್ತೆಗೆ ನಗರದ ಶಿವಾಜಿ ಸರ್ಕಲ್ದಿಂದ ಮೇಲ್ಸೆತುವೆ ನಿರ್ಮಾಣ ಮತ್ತು ಕೇಂದ್ರ ಬಸ್ ನಿಲ್ದಾಣದಿಂದ ಬಿಎಲ್ಡಿಇ ಆಶ್ರಮ ರಸ್ತೆಗೆ ಗಾಂಧಿಚೌಕ ಮೂಲಕ ಮೇಲ್ಸೆತುವೆ ನಿರ್ಮಾಣ ತುಂಬಾ ಅತ್ಯವಶವಿದ್ದು, ಕೂಡಲೇ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಈ ಕಾಮಗಾರಿ ಕೈಗೊಳ್ಳುವಂತೆ ಅವರು ಒತ್ತಾಯಿಸಿದರು. ಅಲ್ಲದೆ, ಅದೇ ತೆರನಾಗಿ ಗುಂಟಾ ಪ್ಲಾಟ್ ಅನುಮೋದನೆ ಕೂಡಲೆ ನಿಲ್ಲಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವುದು ಸೇರಿದಂತೆ ನಗರದ ಪ್ರಗತಿಗೆ ಪೂರಕವಿರುವ ಸಮಗ್ರವಾದ ಅಂಶಗಳ ಕುರಿತು ಮನವಿಯಲ್ಲಿ ತಿಳಿಸಿದ್ದಾರೆ.
ಮನವಿ ಸಲ್ಲಿಕೆ ಸಂದರ್ಭದಲ್ಲಿ ಬಲಿಷ್ಠ ಭಾರತ ನಿರ್ಮಾಣ ಸೇನೆ ಅಧ್ಯಕ್ಷ ಪುನೀತ ಸಜ್ಜನ, ಕರುನಾಡ ಕ್ರಾಂತಿ ಸೇನೆ ಜಿಲ್ಲಾಧ್ಯಕ್ಷ ರವಿ ಗಾಯಕವಾಡ, ಈಶ್ವರ ಯೋಗಾಕೇಂದ್ರದ ಅಧ್ಯಕ್ಷರು, ವಕೀಲರಾದ ಎಸ್.ಬಿ. ಚಿಕ್ಕಣ್ಣವರ, ಇತರರಿದ್ದರು.