

ವಿಜಯವಾಣಿ ಸುದ್ದಿಜಾಲ ಧಾರವಾಡ
ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕು ಪತ್ರ ವಿತರಣೆ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ (ಎಐಕೆಕೆಎಂಎಸ್) ಜಿಲ್ಲಾ ಸಮಿತಿ ವತಿಯಿಂದ ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ನಗರದ ಕಲಾಭವನ ಮೈದಾನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಯಲ್ಲಿ ಆಗಮಿಸಿದ ಪ್ರತಿಭಟನಾಕಾರರು, ಜಿಲ್ಲಾಧಿಕಾರಿ ಕಚೇರಿ ಎದುರು ಕೆಲ ಹೊತ್ತು ಪ್ರತಿಭಟಿಸಿ ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲೆಯ ಎಲ್ಲ ಬಗರ್ ಹುಕುಂ ಸಾಗುವಳಿದಾರರಿಗೆ ಕೂಡಲೇ ಹಕ್ಕು ಪತ್ರಗಳನ್ನು ನೀಡಲು ಅಗತ್ಯ ಕ್ರಮವಹಿಸಬೇಕು. ರೈತರ ಮೇಲೆ ಹಾಕಿರುವ ಅನವಶ್ಯಕ ಪ್ರಕರಣಗಳನ್ನು ಹಿಂಪಡೆಯಬೇಕಲ್ಲದೆ, ಅರಣ್ಯ ಇಲಾಖೆ ಕಿರುಕುಳ ತಪ್ಪಿಸಬೇಕು. ಮೆಕ್ಕೆಜೋಳ, ಹತ್ತಿ, ಭತ್ತ, ಸೋಯಾಬಿನ್ ಬೆಳೆಗಳಿಗೆ ಬೆಂಬಲ ಬೆಲೆ ನೀಡಿ ಖರೀದಿ ಪ್ರಕ್ರಿಯನ್ನು ಕಟಾವಿಗೆ ಮುಂಚಿತವಾಗಿ ಪ್ರಾರಂಭಿಸಬೇಕು ಎಂದು ಆಗ್ರಹಿಸಿದರು.
ಕೃಷಿ ಕಾರ್ಮಿಕರು ವಲಸೆ ಹೋಗುವುದನ್ನು ತಪ್ಪಿಸಲು ಉದ್ಯೋಗ ನೀಡಲು ಪರಿಣಾಮಕಾರಿಯಾಗಿ ನರೇಗಾ ಯೋಜನೆ ಜಾರಿಗೊಳಿಸಬೇಕು. ಜಿಲ್ಲೆಯಲ್ಲಿ ಹದಗೆಟ್ಟ ರಸ್ತೆಗಳ ದುರಸ್ತಿ, ರೈತರ ಭೂಮಿಯನ್ನು ಅತಿಕ್ರಮಿಸುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳುವುದು, ಶ್ರಮಾಧಾರಿತ ಕಾರ್ಖಾನೆಗಳ ಆರಂಭ ಸೇರಿ ಇತರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.
ಬಳಿಕ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿಪತ್ರ ರವಾನಿಸಿದರು. ದೀಪಾ ಧಾರವಾಡ, ಶರಣು ಗೋನವಾರ, ಹನುಮೇಶ ಹುಡೇದ, ಅಲ್ಲಾವುದೀನ್ ಅಡ್ಲಿ, ಕಲ್ಲಪ್ಪ, ಗೌರಮ್ಮ, ಅಣ್ಣಪ್ಪ ಕುಲಕರ್ಣಿ, ಶಿವಲಿಂಗಪ್ಪ ಉಣಕಲ್, ಸಜ್ಜನ್, ಶ್ರೀದೇವಿ ದೊಡ್ಡಮನೆ, ಬಸಪ್ಪ ನೇಕಾರ, ಇತರರು ಇದ್ದರು.