

ಚನ್ನಗಿರಿ: ಪೌರ ನೌಕರರ ನ್ಯಾಯ ಸಮ್ಮತ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ ಪಟ್ಟಣದ ಪುರಸಭೆ ಸಿಬ್ಬಂದಿ ಹಾಗೂ ಪೌರ ಕಾರ್ವಿುಕರು ಗುರುವಾರ ಕಚೇರಿ ಹಾಗೂ ಪಟ್ಟಣದ ಸ್ವಚ್ಛತೆ ಕಾರ್ಯ ಸ್ಥಗಿತಗೊಳಿಸಿ ಪುರಸಭೆ ಎದುರು ಅನಿರ್ದಿಷ್ಟಾವಧಿ ಮುಷ್ಕರ ಪ್ರಾರಂಭಿಸಿದರು.
ಪ್ರತಿಭಟನೆ ನೇತ್ರತ್ವ ವಹಿಸಿದ್ದ ಪುರಸಭೆ ಕಂದಾಯ ಅಧಿಕಾರಿ ಮಂಜುನಾಥ್ ಮಾತನಾಡಿ, ನಗರ ಸ್ಥಳೀಯ ಸಂಸ್ಥೆಗಳಿಂದ ನೇರ ಪಾವತಿಯಡಿಯಲ್ಲಿ ಪರಿಗಣಿಸುವಂತೆ ಮತ್ತು ಇತರೆ ನೌಕರರ ನ್ಯಾಯ ಸಮ್ಮತ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸದೆ ಇರುವುದರಿಂದ ಎಲ್ಲ ಕೆಲಸ ಕಾರ್ಯಗಳನ್ನು ಸ್ಥಗಿತಗೊಳಿಸುತ್ತಿದ್ದೇವೆ ಎಂದರು.
ಕೆಲವರು ಪ್ರಾಮಾಣಿಕವಾಗಿ 25 ಕ್ಕಿಂತ ಹೆಚ್ಚಿನ ವರ್ಷ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಇನ್ನೂ ಕೆಲವರು ದುಡಿಯುವ ವಯಸ್ಸು ಮುಗಿದು ಯಾವುದೇ ಅನುಕೂಲತೆಗಳಿಲ್ಲದೇ ಮನೆಗೆ ಹೋಗುವ ಪರಿಸ್ಥಿತಿಯಲ್ಲಿದ್ದಾರೆ. ಈ ಬಗ್ಗೆ ಅನೇಕ ಬಾರಿ ಪ್ರತಿಭಟನೆ ಹಾಗೂ ಮನವಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಸಿಬ್ಬಂದಿ ಹಾಗೂ ಪೌರಕಾರ್ವಿುಕರನ್ನು ನಿರ್ಲಕ್ಷ್ಯ ಮಾಡುತ್ತಿದೆ. ಎಲ್ಲವನ್ನು ಸರಿಪಡಿಸುವವರೆಗೆ ಯಾರೂ ಕರ್ತವ್ಯಕ್ಕೆ ಹಾಜರಾಗುವುದಿಲ್ಲ ಎಂದು ಹೇಳಿದರು.
ಹೊರಗುತ್ತಿಗೆ ಆಧಾರದ ಮೇಲೆ ಕಂಪ್ಯೂಟರ್ ಆಪರೇಟರ್, ವಾಟರ್ವುನ್, ವಾಹನ ಚಾಲಕರು, ಬೀದಿ ನಿರ್ವಹಣಾ ಕಾರ್ವಿುಕರು, ಲೋಡರ್ಸ್, ಕ್ಲೀನರ್ಸ್ ಸೇರಿ ಅನೇಕ ವೃಂದದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾರ್ವಿುಕರನ್ನು ಗುತ್ತಿಗೆ ಪದ್ಧತಿಯಿಂದ ಮುಕ್ತಿಗೊಳಿಸಿ ನೇರ ಪಾವತಿಯಡಿ ಪರಿಗಣಿಸಬೇಕು ಎಂದರು.
ಪ್ರತಿಭಟನೆಯಲ್ಲಿ ಪುರಸಭೆ ವ್ಯವಸ್ಥಾಪಕ ವೈ.ಎಸ್. ಆರಾಧ್ಯ, ಆರೋಗ್ಯ ಅಧಿಕಾರಿ ಶಿವರುದ್ರಪ್ಪ, ಬಾಲಾಜಿರಾವ್, ವಿಶ್ವನಾಥ್, ಪ್ರೇಮಲೀಲಾ, ಕಾಂತರಾಜ್, ಕೆ.ಎಸ್. ಮಂಜುನಾಥ್, ಭೀಷ್ಮಾ, ಫಾತಿಮಾ, ಕೃಷ್ಣಪ್ಪ, ವಿಜಯಕುಮಾರ್, ಅನಿಲ್, ಮದನ್ ಇತರರು ಇದ್ದರು.