

ವಿಜಯವಾಣಿ ಸುದ್ದಿಜಾಲ ಧಾರವಾಡ
ಆಟೋ ರಿಕ್ಷಾ ಚಾಲಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಲಕ್ಷ್ಮಣ ಹಿರೇಕೆರೂರ ಆಟೋ ಚಾಲಕರ ಸಂಘದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
ಆಟೋಗಳೊಂದಿಗೆ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಪ್ರತಿಭಟನಾಕಾರರು, ಹು-ಧಾ ಅವಳಿನಗರದಲ್ಲಿ ಸುಮಾರು 17 ಸಾವಿರ ಆಟೋ ರಿಕ್ಷಾಗಳಿದ್ದು, ಚಾಲಕರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕೂಡಲೇ ಸಮಸ್ಯೆಗಳಿಗೆ ಪರಿಹಾರ ನೀಡಬೇಕು ಎಂದು ಪ್ರತಿಭಟನೆ ನಡೆಸಿದರು.
ಆಟೋ ಪಾಸಿಂಗ್ ಹಾಗೂ ರಹದಾರಿ ನವೀಕರಣಕ್ಕೆ ಆರ್ಟಿಓ ವಿಧಿಸುತ್ತಿರುವ ದಂಡವನ್ನು ಕೈ ಬಿಡಬೇಕು. ರಹದಾರಿ ನವೀಕರಣ ಆಗದ ಆಟೋ ಮಾಲೀಕರಿಗೆ ತಿಂಗಳಿಗೆ 50 ರೂ. ದಂಡ ವಿಧಿಸುವುದು ಹು-ಧಾ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಮಾತ್ರ ಇದೆ. ಹೀಗಾಗಿ ಸರ್ಕಾರದ ದರದಲ್ಲಿ 5 ವರ್ಷಗಳ ಅವಧಿಗೆ ಪರ್ಮಿಟ್ ನೀಡುವ ಪದ್ಧತಿ ಜಾರಿಗೆ ತರಬೇಕು ಎಂದು ಆಗ್ರಹಿಸಿದರು.
ಹು-ಧಾದಲ್ಲಿ ಈಗಿರುವ ಆಟೋ ನಿಲ್ದಾಣಗಳನ್ನು ಅಧಿಕೃತವಾಗಿ ಸ್ಮಾರ್ಟ್ ಸಿಟಿ ಅಡಿ ಅಥವಾ ಮಹಾನಗರ ಪಾಲಿಕೆ ಅಡಿ ಅಭಿವೃದ್ಧಿಪಡಿಸಿ ಮೂಲ ಸೌಕರ್ಯ ನೀಡಬೇಕು. ಹು-ಧಾ ಅವಳಿನಗರದಲ್ಲಿ ಓಲಾ, ಊಬರ್ ಸೇರಿ ಇತರ ಖಾಸಗಿ ಕಂಪನಿಗಳಿಗೆ ಜಿಲ್ಲಾಡಳಿತ ಅನುಮತಿ ನೀಡಬಾರದು. ಸ್ವಂತ ಮನೆ ಇಲ್ಲದೆ ಜೀವನ ಸಾಗಿಸುತ್ತಿರುವ ಚಾಲಕರಿಗೆ ಹು-ಧಾ ನಗರಗಳಲ್ಲಿ ಪ್ರತ್ಯೇಕ ಆಟೋ ನಗರ ನಿರ್ಮಿಸಿ ಮೂಲ ಸೌಕರ್ಯ ಕಲ್ಪಿಸಬೇಕು. ಇದಲ್ಲದೆ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿನ ಸಿಬ್ಬಂದಿಯ ಅನವಶ್ಯಕ ಕಿರುಕುಳ ತಪ್ಪಿಸುವುದು ಸೇರಿ ವಿವಿಧ ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕು ಎಂದು ಆಗ್ರಹಿಸಿದರು. ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿಪತ್ರ ರವಾನಿಸಿದರು.
ಸಂಘದ ಅಧ್ಯಕ್ಷ ಹನಮಂತಪ್ಪ ಪವಾಡಿ, ಉಪಾಧ್ಯಕ್ಷ ಮಂಜುನಾಥ ಉಳ್ಳಾಗಡ್ಡಿ, ಪ್ರಧಾನ ಕಾರ್ಯದರ್ಶಿ ಪ್ರಕಾಶ ಉಳ್ಳಾಗಡ್ಡಿ, ರಾಜು ಕಾಲವಾಡ, ಚಿದಾನಂದ ಸವದತ್ತಿ, ಪುಂಡಲೀಕ ಬಡಿಗೇರ, ಇತರರು ಇದ್ದರು.