

ಮಂಡ್ಯ: ಕೆಆರ್‌ಎಸ್ ಜಲಾಶಯದ ಸುರಕ್ಷತೆ ಹಿನ್ನೆಲೆಯಲ್ಲಿ ಟ್ರಯಲ್ ಬ್ಲಾಸ್ಟ್ ಸ್ಥಗಿತಗೊಳಿಸುವುದರ ಜತೆಗೆ ಅಣೆಕಟ್ಟೆ ಸುರಕ್ಷತಾ ಮಸೂದೆ ಅನ್ವಯ ಅಣೆಕಟ್ಟೆ ಸುರಕ್ಷತಾ ಸಮಿತಿ ರಚಿಸುವಂತೆ ಒತ್ತಾಯಿಸಿ ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ನಗರದ ಸರ್‌ಎಂವಿ ಪ್ರತಿಮೆ ಎದುರು ಧರಣಿ ನಡೆಸಿದ ಸಂಘದ ಕಾರ್ಯಕರ್ತರು, ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಜತೆಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿರಿ ಅವರಿಗೆ ಮನವಿ ಸಲ್ಲಿಸಿ ಟ್ರಯಲ್ ಬ್ಲಾಸ್ಟ್ ಸ್ಥಗಿತಗೊಳಿಸುವಂತೆ ಒತ್ತಾಯಿಸಿದರು.
ಕೃಷ್ಣರಾಜಸಾಗರ ಅಣೆಕಟ್ಟೆಗೆ ನೂರು ವರ್ಷ ತುಂಬುತ್ತಿದೆ. ಇಷ್ಟೊಂದು ಹಳೆಯದಾದ ಪಾರಂಪರಿಕ ಅಣೆಕಟ್ಟೆ ಸಮೀಪದ ಬೇಬಿಬೆಟ್ಟ ಸುತ್ತಮುತ್ತಲ ಪ್ರದೇಶದಲ್ಲಿ ಸ್ಪೋಟಕ ಕಾಯ್ದೆ, ಅರಣ್ಯ ಸಂರಕ್ಷಣಾ ಕಾಯ್ದೆ, ಪರಿಸರ ಕಾಯ್ದೆ ಉಲ್ಲಂಘಿಸಿ ಮೆಗ್ಗರ್ ಬ್ಲಾಸ್ಟ್, ಬೋರ್ ಬ್ಲಾಸ್ಟ್ ಬಳಸಿ ಅಕ್ರಮ ಗಣಿಗಾರಿಕೆ ನಡೆಸಲಾಗಿದೆ. 2018ರ ಸೆಪ್ಟೆಂಬರ್‌ನಲ್ಲಿ ಸ್ಫೋಟದಿಂದ ಸೃಷ್ಟಿಯಾದ ಕಂಪನದ ಅಪಾಯಕಾರಿ ಅಲೆ ಕೆಆರ್‌ಎಸ್‌ನಲ್ಲಿರುವ ಭೂಕಂಪನ ಮಾಪನ ಕೇಂದ್ರ ದಾಖಲು ಮಾಡಿಕೊಂಡಿತ್ತು. ಇದರಿಂದ ಎಚ್ಚೆತ್ತ ರಾಜ್ಯ ಪ್ರಕೃತಿ ವಿಕೋಪ ನಿರ್ವಹಣಾ ಸಂಸ್ಥೆ ಮುನ್ನೆಚ್ಚರಿಕೆ ಕ್ರಮವಾಗಿ ಜಲಾಶಯದ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಷೇಧಿಸಲು ನೀಡಿದ ನಿರ್ದೇಶನದಂತೆ ಗಣಿಗಾರಿಕೆ ನಿಷೇಧಿಸಲಾಗಿದೆ ಎಂದು ಹೇಳಿದರು.
ಆದರೂ ಸಹ ಅಕ್ರಮ ಗಣಿಗಾರಿಕೆ ಲಾಭದ ಮೇಲೆ ಕಣ್ಣಿಟ್ಟಿರುವ ಗಣಿಮಾಲೀಕರು ಪರವಾನಿಗೆ ನಿಯಮ ಉಲ್ಲಂಘಿಸಿ ಅಕ್ರಮವಾಗಿ ಗಣಿಗಾರಿಕೆ ಮುಂದುವರೆಸಿದೆ. ಗಣಿಗಾರಿಕೆ ಸುಗಮವಾಗಿ ಮುಂದುವರಿಸಲು ನ್ಯಾಯಾಲಯದ ನೆರವು ಪಡೆಯಲು ಮುಂದಾಗಿದ್ದು, ಇದರ ಪರಿಣಾಮವಾಗಿ ಜಿಲ್ಲಾಡಳಿತ ಟ್ರಯಲ್ ಬ್ಲಾಸ್ಟ್ ನಡೆಸಲು ಮುಂದಾಗಿದೆ. ಕೃಷ್ಣರಾಜಸಾಗರ ರಕ್ಷಣೆಗೆ ಜಿಲ್ಲಾಡಳಿತ ನಿರ್ಲಕ್ಷೃ ತೋರಿದ್ದು, ಮುಂದಾಗುವ ಅನಾಹುತ ತಪ್ಪಿಸಲು ಅಣೆಕಟ್ಟು ಸುರಕ್ಷತಾ ಮಸೂದೆ 2021ರ ಪ್ರಕಾರ ಕೂಡಲೇ ಅಣೆಕಟ್ಟು ಸುರಕ್ಷತಾ ಸಮಿತಿ ರಚಿಸಬೇಕು. ಪಾರಂಪರಿಕ ಅಣೆಕಟ್ಟೆ ಉಳಿಸಿಕೊಳ್ಳಲು ಟ್ರಯಲ್ ಬ್ಲಾಸ್ಟ್ ಸ್ಥಗಿತಗೊಳಿಸಬೇಕು. ಕಾಯ್ದೆ ಉಲ್ಲಂಘಿಸಿ ಅಕ್ರಮ ಗಣಿಗಾರಿಕೆ ನಡೆಸಿರುವ ಗಣಿ ಮಾಲೀಕರಿಂದ ಬಾಕಿ ಇರುವ ರಾಜಧನವನ್ನು ವಸೂಲಿ ಮಾಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ಸುನೀತಾ ಪುಟ್ಟಣ್ಣಯ್ಯ, ಎ.ಎಲ್.ಕೆಂಪೂಗೌಡ, ಚಂದ್ರಶೇಖರ್, ಲಿಂಗಪ್ಪಾಜಿ, ಶಂಕರ್, ಬಸವರಾಜ್, ಸಿ.ಕುಮಾರಿ, ಪೂರ್ಣಿಮಾ ಇತರರಿದ್ದರು.