3000 ರೂ. ಬೆಂಬಲ ಬೆಲೆ ನಿಗದಿಗೆ ಆಗ್ರಹ

11 vikram 5
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಮೆಕ್ಕೆಜೋಳಕ್ಕೆ ಕೂಡಲೇ 3000 ರೂ. ಬೆಂಬಲ ಬೆಲೆ ನೀಡಿ ಖರೀದಿಸುವಂತೆ ಆಗ್ರಹಿಸಿ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ (ಎಐಕೆಕೆಎಂಎಸ್​) ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಲಾಯಿತು.

ಜಿಲ್ಲೆಯ ಕಲಘಟಗಿ ಮತ್ತು ಅಳ್ನಾವರ ತಾಲೂಕಿನ ರೈತರು ಮೆಕ್ಕೆಜೋಳವನ್ನೇ ಪ್ರಮುಖ ಬೆಳಯಾಗಿ ಬೆಳೆಯುತ್ತಿದ್ದಾರೆ. ಇದೇ ಅವರ ಜೀವನಕ್ಕೆ ಆಧಾರ. ಕಳೆದ ವರ್ಷ ಬರಗಾಲದಿಂದ ಬೆಳೆ ಮಣ್ಣು ಪಾಲಾಗಿತ್ತು. ಈ ವರ್ಷ ಉತ್ತಮ ಮಳೆಯಿಂದ ಹೆಚ್ಚಿನ ಫಸಲು ಪಡೆಯುವ ನಿರೀಕ್ಷೆಯಲ್ಲಿದ್ದ ರೈತರಿಗೆ ಅಕಾಲಿಕ ಮಳೆ ನಿರಾಸೆ ಉಂಟು ಮಾಡಿದೆ. ಇಂತಹ ಸಮಯದಲ್ಲಿ ಕೈಗೆ ಬಂದ ಮೆಕ್ಕೆಜೋಳಕ್ಕೆ ಕಳೆದ ವಾರ 3000 ರೂ. ದಿಂದ 3200 ವರೆಗೆ ಮಾರಾಟವಾಗಿತ್ತು. ಈಗ 1800-2000 ರೂ. ಕೇಳುತ್ತಿದ್ದರಿಂದ ರೈತರು ಚಿಂತೆಗೀಡಾಗಿದ್ದಾರೆ. ಹೀಗಾಗಿ ಕ್ವಿಂಟಲ್​ಗೆ ಕನಿಷ್ಠ 3000 ರೂ. ನಿಗದಿ ಮಾಡಬೇಕು ಎಂದು ಆಗ್ರಹಿಸಿದರು.

ಬೆಲೆ ನಿಗದಿ ಜತೆಗೆ ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭ, ಸೂಟ್​ ಮುರಿಯುವುದನ್ನು ನಿಲ್ಲಿಸಬೇಕು. ಮೆಕ್ಕೆಜೋಳ ಬೆಳೆ ನಷ್ಟ ಪರಿಹಾರ ವಿತರಿಸಬೇಕು ಎಂದು ಆಗ್ರಹಿಸಿದರು. ನಂತರ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿಪತ್ರ ರವಾನಿಸಿದರು.

ಸಂಘಟನೆ ಜಿಲ್ಲಾಧ್ಯಕ್ಷೆ ದೀಪಾ ಧಾರವಾಡ, ಗಂಗಾಧರ ಜಾಧವ, ಶರಣು ಗೋನವಾರ, ಹನುಮೇಶ ಹುಡೇದ, ರಾಣಪ್ಪ ಸಾವಂತ್​ನವರ, ಮಲ್ಲಪ್ಪ ಮನ್ಸೂರ, ನಾಗಪ್ಪ, ಹುಸೇನ್​ಸಾಬ್​, ರೈತರು, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net