ವಿವಿಧ ಇಲಾಖೆಯಲ್ಲಿನ ಖಾಲಿ ಹುದ್ದೆಗಳ ಭರ್ತಿಗೆ ಒತ್ತಾಯ

raichur
raichur
Published on

ರಾಯಚೂರು ರಾಜ್ಯದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಸರ್ಕಾರ ಕೂಡಲೇ ಭರ್ತಿ ಮಾಡಿ ನಿರುದ್ಯೋಗ ಸಮಸ್ಯೆಯನ್ನು ಪರಿಹಾರ ಮಾಡಬೇಕೆಂದು ಒತ್ತಾಯಿಸಿ ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿಯಿಂದ ಸೋಮವಾರ ನಗರದ ಟಿಪ್ಪು ಸುಲ್ತಾನ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸಿದರು.

2025-26 ನೇ ಸಾಲಿಗೆ ರಾಜ್ಯದ 44 ಇಲಾಖೆಗಳಲ್ಲಿ ಒಟ್ಟು 2,84,881 ಹುದ್ದೆಗಳು ಖಾಲಿ. ಕೇಂದ್ರದ ವಿವಿಧ ಇಲಾಖೆಗಳಲ್ಲಿ 9.5 ಲಕ್ಷ ಹುದ್ದೆಗಳು ಖಾಲಿ ಇದ್ದು, ರೈಲ್ವೆ ಇಲಾಖೆ ಒಂದರಲ್ಲಿ ನಾಲ್ಕು ಲಕ್ಷಕ್ಕೂ ಅಧಿಕ ಹುದ್ದೆಗಳು ಖಾಲಿ ಇವೆ. ಇದರ ಜತೆಗೆ ಹೊಸದಾಗಿ ಸೃಜಿಸಬೇಕಾದ ಹುದ್ದೆಗಳು ಇನ್ನೆಷ್ಟೋ ಇವೆ. ಈ ಖಾಲಿ ಇರುವ ಹುದ್ದೆಗಳ ನೇಮಕಕ್ಕೆ

ಕಿಂಚಿತ್ತು ಪ್ರಯತ್ನಗಳು ನಡೆಯುತ್ತಿಲ್ಲ. ಕುಂಟು ನೆಪಗಳನ್ನು ಹೇಳಿ ನೇಮಕಾತಿಗಳನ್ನು ಮುಂದೂಡುವ ಪರಿಪಾಠವನ್ನು ಎಲ್ಲಾ ಸರ್ಕಾರಗಳು ಅನುಸರಿಸುತ್ತಿವೆಂದು ಆರೋಪಿಸಲಾಯಿತು.

ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 59,454 ಹುದ್ದೆಗಳು, ಕಲ್ಯಾಣ ಕರ್ನಾಟಕ ಭಾಗದ 6 ಜಿಲ್ಲೆಗಳಲ್ಲಿ 21,381 ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಇನ್ನು ಚಿತ್ರಕಲಾ, ಸಂಗೀತ, ನಾಟಕ, ದೈಹಿಕ ಸೇರಿದ ವಿಶೇಷ ಶಿಕ್ಷಕರ ನೇಮಕಾತಿಯಾಗಿಲ್ಲ. ಅದರಂತೆ ಆರೋಗ್ಯ, ಗ್ರಾಮೀಣಾಭಿವೃದ್ಧಿ, ಹಾಗೂ ಪಂಚಾಯತ್ ರಾಜ್, ಕಂದಾಯ, ಒಳಾಡಳಿತ ಸೇರಿದಂತೆ ಹಲವಾರು ಇಲಾಖೆಗಳಲ್ಲಿ ದೊಡ್ಡಸಂಖ್ಯೆಯ ಹುದ್ದೆಗಳು ಖಾಲಿ ಇವೆ. ಆದರೆ ಸರ್ಕಾರ ಖಾಲಿ ಇರುವ ಹುದ್ದೆಗಳನ್ನು ಅತಿಥಿ ಶಿಕ್ಷಕ, ಅತಿಥಿ ಉಪನ್ಯಾಸಕ, ಗುತ್ತಿಗೆ, ಹೊರಗುತ್ತಿಗೆ ಆಧಾರದಲ್ಲಿ ತುಂಬಿಕೊಂಡು ಗೌರವ ಧನದ ಮೂಲಕ ಉದ್ಯೋಗ ಭದ್ರತೆ ನೀಡದೆ ದುಡಿಸಿಕೊಳ್ಳಲಾಗುತ್ತಿದೆ. ಇಷ್ಟೆಲ್ಲಾ ಗಂಭೀರ ಸಮಸ್ಯೆಗಳನ್ನು ಯುವಜನರು ಎದುರಿಸುತ್ತಿದ್ದಾರೆ.

ಅದರಿಂದ ಕೂಡಲೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಇಲಾಖೆಗಳಲ್ಲಿ ಇರುವ ಖಾಲಿ ಹುದ್ದೆಗಳ ನೇಮಕಾತಿಗೆ ಆದೇಶ ಮಾಡಿ ಪಾರದರ್ಶಕವಾಗಿ ನೇಮಕಾತಿ ಮಾಡುವುದರ ಜತೆಗೆ ಕನಿಷ್ಠ ವಯೋಮಿತಿ 5 ವರ್ಷ ಹೆಚ್ಚಿಸಬೇಕೆಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿ ಚನ್ನಬಸವ ಜಾನೇಕಲ್, ಅಧ್ಯಕ್ಷ ಡಾ.ಹನುಮಂತು ಕುರಡಿ, ಜಿಲ್ಲಾ ಕಾರ್ಯದರ್ಶಿ.ರಾಮಚಂದ್ರಪ್ಪ , ಜಂಟಿ ಕಾರ್ಯದರ್ಶಿ ವಿನೋದ್ ಕುಮಾರ್, ಜಂಟಿ ಕಾರ್ಯದರ್ಶಿ ಯಲ್ಲಪ್ಪ ದೊರೆ,ಸಂತೋಷ,ಸುಜೀತ್,ಮಂಜುಶ್ರೀ, ಶಿವು,ರವಿ, ತೇಜಸ್ ಸೇರಿ ಅನೇಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net