

ವಿಜಯವಾಣಿ ಸುದ್ದಿಜಾಲ ಧಾರವಾಡ
ಪರಿಶಿಷ್ಟ ಜಾತಿಗಳ ಉಪವರ್ಗೀಕರಣಕ್ಕಾಗಿ ರಾಜ್ಯ ಸರ್ಕಾರ ತರಾತುರಿಯಲ್ಲಿ ಒಳಮೀಸಲಾತಿ ಸಮೀಕ್ಷೆ ನಡೆಸುತ್ತಿದ್ದು, ಇದರಿಂದ ಬಂಜಾರ ಸಮಾಜಕ್ಕೆ ಅನ್ಯಾಯವಾಗಲಿದೆ. ಸಮೀಕ್ಷೆ ಅವಧಿಯನ್ನು ದೀಪಾವಳಿವರೆಗೂ ವಿಸ್ತರಿಸಬೇಕು ಎಂದು ಬಂಜಾರ (ಲಂಬಾಣಿ) ಹಕ್ಕು ಸಂರಕ್ಷಣಾ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಎಸ್.ಆರ್. ರಾಜಾನಾಯ್ಕ ಆಗ್ರಹಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಳಮೀಸಲಾತಿ ವಿಚಾರದಲ್ಲಿ ನಾಗಮೋಹನ ದಾಸ ಸರ್ಕಾರಕ್ಕೆ ಮಧ್ಯಂತರ ವರದಿ ನೀಡಿದ್ದಾರೆ. ಸುಪ್ರೀಂ ಕೋರ್ಟ್ ಆದೇಶದಂತೆ ಪ್ರಾಯೋಗಿಕ ದತ್ತಾಂಶ ಸಂಗ್ರಹಣೆ ಮಾಡದೆ ಒಳಮೀಸಲಾತಿ ಕಲ್ಪಿಸಲು ಸಾಧ್ಯವಿಲ್ಲವೆಂದು ಅಭಿಪ್ರಾಯಪಟ್ಟಿದ್ದಾರೆ. ಹೀಗಾಗಿ ಮೇ 5ರಿಂದ 17ರವರೆಗೆ ಸಮೀಕ್ಷೆ ಕಾರ್ಯ ನಡೆಸಲು ಆಯೋಗ ಮುಂದಾಗಿದೆ ಎಂದು ದೂರಿದರು.
ಬಂಜಾರ ಸಮಾಜವು ಅಲೆಮಾರಿ ಸಮುದಾಯವಾಗಿದ್ದು, ಅರೆಕಾಲಿಕ ಉದ್ಯೋಗಕ್ಕಾಗಿ ತಾಂಡಾಗಳಿಂದ ಹೊರಗೆ ಹೋಗಿರುವ ಕುಟುಂಬಗಳ ಜನರನ್ನು ಸಮೀಕ್ಷೆಗೆ ನೀಡಿರುವ ಅವಧಿಯಲ್ಲಿ ಕರೆತರುವುದು ಕಷ್ಟದ ಕೆಲಸ. ಆದ್ದರಿಂದ ಕೇಂದ್ರ ಸರ್ಕಾರ ಜಾತಿ ಜನಗಣತಿ ಕೈಗೊಳ್ಳುವ ನಿರ್ಧಾರ ಘೋಷಿಸಿದ್ದು, ಜಾತಿ ಗಣತಿಯ ಸಮಯದಲ್ಲೇ ಸಮೀಕ್ಷೆ ಮಾಡಬೇಕು ಎಂದು ಒತ್ತಾಯಿಸಿದರು.
ಬಂಜಾರ ಕುಟುಂಬಗಳು ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ರಾಜಕೀಯವಾಗಿ ಹಿಂದುಳಿದಿವೆ. ಲಂಬಾಣಿಗರು ವಾಸಿಸುವ ಗ್ರಾಮಗಳು ಕಂದಾಯ ಗ್ರಾಮಗಳಾಗಿಲ್ಲ. ಹಕ್ಕುಪತ್ರವಿಲ್ಲ. ಜೀವನೋಪಾಯಕ್ಕೆ ಇತರ ಕಡೆಗಳಿಗೆ ವಲಸೆ ಹೋಗಿದ್ದಾರೆ. ಈಗ ಸಮೀಕ್ಷೆಯಲ್ಲಿ ಪಾಲ್ಗೊಳ್ಳಲು ಅವರಿಂದ ಸಾಧ್ಯವಾಗುವುದಿಲ್ಲ ಎಂದರು.
ರವಿಕಾಂತ ಆಂಗಡಿ, ರೂಪಾ ಎನ್., ಕೃಷ್ಣಾಜಿ ಚವ್ಹಾಣ, ಪಾಂಡು ಚವ್ಹಾಣ, ವಾಸು ಲಮಾಣಿ, ಇತರರು ಇದ್ದರು.