

ಬೆಳಗಾವಿ: ಶಾಲಾ-ಕಾಲೇಜುಗಳು ಪ್ರಾರಂಭವಾಗಿವೆ. ಬಸ್‌ನಲ್ಲಿ ಪ್ರಯಾಣಿಸುವ ವಿದ್ಯಾರ್ಥಿಗಳ ರಿಯಾಯತಿ ವಿದ್ಯಾರ್ಥಿ ಬಸ್‌ಪಾಸ್ ಅವಧಿ ಮುಗಿದಿದ್ದು, ಜುಲೈನಿಂದ ಸೆಪ್ಟೆಂಬರ್‌ವರೆಗೆ ಬಸ್‌ಪಾಸ್ ಅವಧಿ ವಿಸ್ತರಿಸುವಂತೆ ಒತ್ತಾಯಿಸಿ ವಿದ್ಯಾರ್ಥಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಮೌನ ಪ್ರತಿಭಟನೆ ನಡೆಸಿದರು.
ನಗರದ ಕಾಲೇಜುಗಳಿಗೆ ವಿದ್ಯಾಭ್ಯಾಸ ಮಾಡಲು ಬೆಳಗಾವಿ ತಾಲೂಕು ಸೇರಿ ನಾನಾ ತಾಲೂಕುಗಳಿಂದ ಮಕ್ಕಳು ದೂರದ ಊರುಗಳಿಂದ ಬಸ್‌ನಲ್ಲಿ ಬೆಳಗಾವಿಗೆ ಬರುತಾರೆ. ತರಗತಿಗಳು ಇನ್ನೂ ಇವೆ. ಆದರೆ, ಇದೀಗ ಈ ವಿದ್ಯಾರ್ಥಿಗಳ ಬಸ್‌ಪಾಸ್ ಅವಧಿ ಜೂನ್ 30ಕ್ಕೆ ಮುಗಿದಿದೆ. ಸೆಪ್ಟೆಂಬರ್‌ವರೆಗೆ ವಿಸ್ತರಿಸಿಕೊಡುವಂತೆ ಕಾಲೇಜು ಸಿಬ್ಬಂದಿ ಹಾಗೂ ಸಾರಿಗೆ ಸಂಸ್ಥೆಯ ಬಸ್‌ಪಾಸ್ ಕೌಂಟರ್‌ಗೆ ಹೋಗಿ ವಿಚಾರಿಸಿದರೆ, ಆದೇಶ ಬಂದಿಲ್ಲ ಎನ್ನುತ್ತಾರೆ. ಇತ್ತ ಕಾಲೇಜಿನಲ್ಲಿ ಕೇಳಿದರೆ ಸಿಬ್ಬಂದಿ ನಮಗೇನು ಗೊತ್ತಿಲ್ಲ. ಕೆಎಸ್‌ಆರ್‌ಟಿಸಿಯಲ್ಲಿ ಕೇಳಿ ಎನ್ನುತ್ತಿದ್ದಾರೆ. ಹೀಗಾಗಿ ಬಸ್‌ಪಾಸ್ ಅವಧಿ ವಿಸ್ತರಿಸುವಂತೆ ತಿಳಿಸಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದರು.