ಹೆಸರು ಖರೀದಿ ಕೇಂದ್ರ ಸ್ಥಾಪನೆಗೆ ಆಗ್ರಹ

18 vikram 2
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ರಾಜ್ಯ ಸರ್ಕಾರ ರೈತರ ಹಿತ ಕಾಪಾಡುವ ನಿಟ್ಟಿನಲ್ಲಿ ಬೆಂಬಲ ಬೆಲೆಯಡಿ ಹೆಸರು ಖರೀದಿ ಕೇಂದ್ರಗಳನ್ನು ಸ್ಥಾಪಿಸಬೇಕು ಎಂದು ಜನತಾದಳ (ಸಂಯುಕ್ತ)ದ ಜಿಲ್ಲಾಧ್ಯಕ್ಷ ಶ್ರೀಶೈಲಗೌಡ ಕಮತರ ಆಗ್ರಹಿಸಿದ್ದಾರೆ.
ಈಗಾಗಲೇ ಹೆಸರು ಬೆಳೆ ರೈತರ ಕೈ ಸೇರಿದೆ. ಆದರೆ ಮಾರುಕಟ್ಟೆಯಲ್ಲಿ ಬೆಲೆ ಕುಸಿತದಿಂದ ರೈತರು ಕಂಗಾಲಾಗಿದ್ದಾರೆ. ಅತಿಯಾದ ಮಳೆಯಿಂದ ಅಪಾರ ಪ್ರಮಾಣದಲ್ಲಿ ಬೆಳೆ ಹಾನಿಯಾಗಿ ಇಳುವರಿ ಕುಂಠಿತಗೊಂಡಿದೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಕೈ ಸೇರಿದ ಅಲ್ಪಸ್ವಲ್ಪ ಬೆಳೆಗೂ ಸರಿಯಾದ ಬೆಲೆ ಸಿಗದೆ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಹೀಗಾಗಿ ಸರ್ಕಾರ ಕ್ರಮಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.
ರೈತರು ಆರ್ಥಿಕ ತೊಂದರೆಯಿಂದ ಜೀವನ ನಿರ್ವಹಣೆಗಾಗಿ ಮದ್ಯವರ್ತಿಗಳಿಗೆ ಅಗ್ಗದ ದರದಲ್ಲಿ ತಮ್ಮ ಉತ್ಪನ್ನ ಮಾರಾಟ ಮಾಡುವ ಸ್ಥಿತಿ ತಲೆದೋರಿದೆ. ಈ ಸಮಯದಲ್ಲಿ ಸರ್ಕಾರ ಮತ್ತು ಪ್ರತಿಪಕ್ಷವು ರೈತರ ನೆರವಿಗೆ ಬಾರದೆ, ಹಾರಿಕೆ ಉತ್ತರ ನೀಡುತ್ತಾ ಕಾಲಹರಣ ಮಾಡುತ್ತಿವೆ. ರೈತರ ವಿಷಯದಲ್ಲಿ ರಾಜಕೀಯ ಮಾಡುವುದನ್ನು ಬಿಟ್ಟು ರೈತರಿಗೆ ನೈತಿಕ ಬೆಂಬಲ ನೀಡಬೇಕು. ಈ ನಿಟ್ಟಿನಲ್ಲಿ ಕೂಡಲೇ ರಾಜ್ಯ ಸರ್ಕಾರ ಬೆಂಬಲ ಬೆಲೆಯಡಿ ಹೆಸರು ಖರೀದಿ ಕೇಂದ್ರಗಳನ್ನು ಸ್ಥಾಪಿಸಬೇಕು ಎಂದು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net