ಮೆಗಾ ಡೈರಿಗೆ ಸ್ಥಾಪನೆಗೆ ಒತ್ತಾಯ

Published on

ಬಳ್ಳಾರಿ ; ಜಿಲ್ಲೆಯಲ್ಲಿಯೇ ಮೆಗಾ ಡೈರಿ ಸ್ಥಾಪನೆ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಇಲ್ಲಿನ ರಾಬಕೊವಿ ಕಚೇರಿ ಮುಂಭಾಗದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನಕಾರರು ಶನಿವಾರ ಪ್ರತಿಭಟಿಸಿದರು.

ಅಧ್ಯಕ್ಷ ಆರ್.ಮಾಧವರೆಡ್ಡಿ ಮಾತನಾಡಿ, ಕಳೆದ ಆರು ತಿಂಗಳಿಂದ ಪ್ರತಿ ಲೀ. 1.50 ರೂ ನಂತೆ ಹಾಲು ಉತ್ಪಾದಕರಿಗೆ ವಿತರಿಸಬೇಕಿದ್ದ ಆರು ಕೋಟಿ ರೂ. ಹಣವನ್ನು ತಕ್ಷಣವೇ ರೈತರ ಖಾತೆಗೆ ಜಮೆ ಮಾಡಬೇಕು. ಜಿಲ್ಲೆಯ ಕೊಳಗಲ್ ಗ್ರಾಮದಲ್ಲಿ ಮೆಗಾ ಡೈರಿಗೆ ಕಾಯ್ದಿರಿಸಲಾದ ಹದಿನೈದು ಎಕರೆ ಜಮೀನು ಖರೀದಿಗೆ 2.9 ಕೋಟಿ ರೂ. ಹಣವನ್ನು ಬಿಡುಗಡೆಗೊಳಿಸಿ ಜಿಲ್ಲೆಯಲ್ಲಿ ಮೆಗಾ ಡೈರಿಯನ್ನು ಸ್ಥಾಪಿಸಲು ಸರ್ಕಾರ ಮುಂದಾಗಬೇಕು. ಅಲ್ಲದೆ, ರಾಬಕೊವಿ ಹಾಲು ಉತ್ಪಾದಕರ ಸಂಘದ ಆಡಳಿತ ಮಂಡಳಿಯು ಅವಧಿ ಮುಗಿದು ಹತ್ತು ತಿಂಗಳು ಕಳೆದರೂ ಚುನಾವಣೆ ನಡೆದಿಲ್ಲ. ಈ ಕೂಡಲೇ ಚುನಾವಣೆ ದಿನಾಂಕವನ್ನು ಘೋಷಣೆ ಮಾಡಬೇಕು. ಕೂಡಲೇ ರೈತರ ಹಾಲು ಮಾರಾಟಗಾರರ ಹಿತಾಸಕ್ತಿಯನ್ನು ಕಾಪಾಡುವಲ್ಲಿ ನಿರ್ಲಕ್ಷೃ ವಹಿಸಿರುವ ಮಹಾ ಮಂಡಳಿಯ ಅಧ್ಯಕ್ಷರ ರಾಜೀನಾಮೆ ನೀಡಬೇಕು. ಈ ಎಲ್ಲ ಬೇಡಿಕೆಗಳನ್ನು ಸರ್ಕಾರ ಈಡೇರಿಸಿದ್ದರೆ ಮುಂದಿನ ದಿನಗಳಲ್ಲಿ ನಾಲ್ಕು ಜಿಲ್ಲೆಗಳಲ್ಲಿನ ಜಿಲ್ಲಾಡಳಿತ ಮುಂಭಾಗದಲ್ಲಿ ಚಳುವಳಿಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ರೈತರೊಂದಿಗೆ ಅಧ್ಯಕ್ಷ ಚಕಮಕಿ : ನಗರದ ರಾಬಕೊವಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ನಿರ್ದೇಶಕರ ಸಭೆಗೆ ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ ಆಗಮಿಸುತ್ತಿದ್ದಂತೆ ಪ್ರತಿಭಟನಾ ನಿರತ ರೈತರು ಅಧ್ಯಕ್ಷರ ಹಾಗೂ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಬಳಿಕ ಪ್ರತಿಭಟನ ಸ್ಥಳಕ್ಕೆ ಆಗಮಿಸಿದ ಭೀಮಾ ನಾಯ್ಕ ಈ ಸಭೆಯಲ್ಲಿ ನಿರ್ದೇಶಕರೊಂದಿಗೆ ಚರ್ಚಿಸಿ ಬಾಕಿ ಉಳಿಸಿಕೊಂಡಿರುವ ಹಣವನ್ನು ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದರು. ಇದಕ್ಕೆ ಒಪ್ಪದ ರೈತರು ಒಕ್ಕೂಟದ ನಿರ್ದೇಶಕರು ಎಲ್ಲರೂ ಇಲ್ಲಿಯೇ ಇದ್ದು ಬಹಿರಂಗವಾಗಿ ಸಭೆ ನಡೆಸಬೇಕು. ಅಲ್ಲದೆ, ಮೆಗಾ ಡೈರಿಯನ್ನು ಜಿಲ್ಲೆಯಲ್ಲಿ ಸ್ಥಾಪಿಸಬೇಕು ಎಂದು ಪಟ್ಟು ಹಿಡಿದರು. ಆದ್ದರಿಂದ, ಕೆಲ ಕಾಲ ರೈತರ ಹಾಗೂ ಅಧ್ಯಕ್ಷರ ನಡುವೆ ಮಾತಿನ ಚಕಮಕಿ ನಡೆಯಿತು. ಈ ವೇಳೆ ಪೊಲೀಸರು ಮಧ್ಯೆವಹಿಸಿ ಪ್ರತಿಭಟನಾ ನಿರತ ರೈತರನ್ನು ಮನವೋಲಿಸಿದರು. ಬಳಿಕ ಅಧ್ಯಕ್ಷರಿಗೆ ಮನವಿ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net