

ನರೇಗಲ್ಲ: ತೊಗರಿ ಬೆಳೆಗಾರರ ಹಿತ ಕಾಪಾಡಲು ಅಸ್ತಿತ್ವಕ್ಕೆ ಬಂದಿರುವ ತೊಗರಿ ಅಭಿವೃದ್ಧಿ ಮಂಡಳಿಯಂತೆ ಕಡಲೆ ಬೆಳೆಗಾರರ ಹಿತರಕ್ಷಣೆಗಾಗಿ ಗದಗನಲ್ಲಿ ಕಡಲೆ ಅಭಿವೃದ್ಧಿ ನಿಗಮ ಸ್ಥಾಪನೆಗೆ ರಾಜ್ಯ ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿ ರೈತಸೇನಾ ವತಿಯಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ನರೇಗಲ್ಲ ಘಟಕದ ಅಧ್ಯಕ್ಷ ಶರಣಪ್ಪ ಧರ್ವಯತ ಮಾತನಾಡಿ, ತೊಗರಿ ಬೆಳೆಗಾರರಿಗೆ ತೋರುವ ಕಾಳಜಿಯನ್ನು ಕಡಲೆ ಬೆಳೆಗಾರರಿಗೆ ನೀಡದಿರುವುದು ಖಂಡನೀಯ. ಕೇಂದ್ರ ಸರ್ಕಾರದ ಕನಿಷ್ಠ ಮಾರಾಟ ಬೆಲೆಯೊಂದಿಗೆ ರಾಜ್ಯ ಸರ್ಕಾರದ 1500 ರೂ.ಗಳಿಗೆ ಹೆಚ್ಚಿಸುವ ಮೂಲಕ ಕಡಲೆ ಬೆಂಬಲ ಬೆಲೆಯನ್ನು ರೂ. 7150 ಕ್ಕೆ ಹೆಚ್ಚಿಸಬೇಕು ಎಂದು ಆಗ್ರಹಿಸಿದರು.
ರೈತ ಮುಖಂಡ ಚಂದ್ರು ಹೊನವಾಡ ಮಾತನಾಡಿ, ನರೇಗಲ್ಲ ಹೋಬಳಿಯಲ್ಲಿ ನಡೆಸಲು ಉದ್ಧೇಶಿಸಿರುವ 220 ಕೆವಿ ಜೋಡು ಗೋಪುರ ವಿದ್ಯುತ್ ಸ್ಥಾವರ ಸ್ಥಾಪನೆ ಕೈಬಿಡಬೇಕು ಎಂದು ಆಗ್ರಹಿಸಿದರು.
ತಹಸೀಲ್ದಾರ್ ಕಿರಣಕುಮಾರ ಕುಲಕರ್ಣಿ ಅವರಿಗೆ ಮನವಿ ಸಲ್ಲಿಸಲಾಯಿತು. ಮನವಿ ಸ್ವೀಕರಿಸಿ ಮಾತನಾಡಿದ ಕಿರಣಕುಮಾರ ಕುಲಕರ್ಣಿ, ತಮ್ಮ ನ್ಯಾಯಯುತವಾದ ಬೇಡಿಕೆಗಳನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು.
ವಿ.ಎಂ. ಪಾಯಪ್ಪಗೌಡ್ರ, ಎಸ್.ಕೆ. ಧರ್ವಯತ, ಎಂ.ವಿ. ಧರ್ವಯತ, ಶಿವಪುತ್ರಪ್ಪ ಸಂಗನಾಳ, ರಂಗಪ್ಪ ನಾಯ್ಕೆ, ಮಲ್ಲಿಕಾರ್ಜುನ ಮಳ್ಳಿ, ಸಿದ್ದಪ್ಪ ಇಟ್ಟಣ್ಣವರ, ಶರಣಪ್ಪ ಹಕ್ಕಿ, ಅಶೋಕ ಗೇದಗೇರಿ, ಜಗದೀಶ ಹೊನವಾಡ, ಬಸಪ್ಪ ಜೋಗಿ, ಶಿವನಗೌಡ ಕಡದಳ್ಳಿ, ಚನ್ನಬಸಪ್ಪ ಕುಷ್ಟಗಿ, ಕಳಕಪ್ಪ ಹುಯಿಲಗೋಳ, ವಿ.ಎ. ಕುಂಬಾರ, ಎಸ್.ಬಿ. ಜುಟ್ಲ, ಮಲ್ಲಪ್ಪ ಹಕಾರಿ, ಹನಮಪ್ಪ ಬೇಲೇರಿ, ಬಿ.ವಿ. ಲಕ್ಕನಗೌಡ್ರ, ಅಶೋಕ ಬೇವಿನಕಟ್ಟಿ, ಈರಪ್ಪ ಹತ್ತಿಕಟಗಿ, ಪಿಎಸ್ಐ ಐಶ್ವರ್ಯ ನಾಗರಾಳ, ಎಎಸ್ಐ ಶೇಖರ ಹೊಸಳ್ಳಿ ಇತರರಿದ್ದರು.