

ವಿಜಯವಾಣಿ ಸುದ್ದಿಜಾಲ ಧಾರವಾಡ
ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ಸಮಾಜಕ್ಕೆ ಅಭಿವೃದ್ದಿ ನಿಗಮ ಮಂಡಳಿ ಸ್ಥಾಪಿಸಬೇಕು ಎಂದು ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ಸಮಾಜ ಅಭಿವೃದ್ಧಿ ಹೋರಾಟ ಸಮಿತಿ ರಾಜ್ಯ ಸಂಚಾಲಕ ಹನುಮಂತಸಾ ಚಂದ್ರಕಾಂತಸಾ ನಿರಂಜನ ಆಗ್ರಹಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾಜದ ಕುಲಪುರುಷ ಸಹಸ್ರಾರ್ಜುನ ಮಹರಾಜರು ಸುದರ್ಶನ ಚಕ್ರದ ಅವತಾರ ಎಂಬುದು ವೇದ ಪುರಾಣದಲ್ಲಿ ಉಲ್ಲೇಖವಿದೆ. ಸಮಾಜದ ಜನಸಂಖ್ಯೆ ಕರ್ನಾಟಕದಲ್ಲಿ 11 ಲಕ್ಷವಿದೆ. ಸ್ವಾಭಿಮಾನದಿಂದ ಜೀವನ ಸಾಗಿಸಿಕೊಂಡು ಬಂದಿರುವ ಸಮಾಜದ ಜನರು ಚಿಕ್ಕಪುಟ್ಟ ವ್ಯಾಪಾರ ಮಾಡುತ್ತಿದ್ದಾರೆ. ಶೇ. 80ರಷ್ಟು ಜನ ಬಡತನ ರೇಖೆಗಿಂತ ಕೆಳಗಿದ್ದು, ಆರ್ಥಿಕ ಪರಿಸ್ಥಿತಿ ಉತ್ತಮವಿಲ್ಲ. ಹೀಗಾಗಿ ಸಮಾಜದ ಅಭಿವೃದ್ಧಿಗೆ ನಿಗಮ ಮಂಡಳಿ ಸ್ಥಾಪಿಸಿ 200 ಕೋಟಿ ರೂ. ಮೀಸಲಿಡಬೇಕು. ಈ ಮೂಲಕ ಸಮಾಜದ ಏಳ್ಗೆಗೆ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.
ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡುವ ಮೂಲಕ ಸಾಮಾಜಿಕ ನ್ಯಾಯ ನೀಡಬೇಕು. ಸರ್ಕಾರದಿಂದ ಸಹಸ್ರಾರ್ಜುನ ಜಯಂತಿ ಆಚರಿಸಲು ಘೋಷಣೆ, ಸಮುದಾಯಕ್ಕೆ ಸರ್ಕಾರದಿಂದ ಗುರುತಿಸುವ ಕಾರ್ಯವಾಗಬೇಕು ಎಂದು ಒತ್ತಾಯಿಸಿದರು.
ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಪ್ರತಿ ಊರಿನಿಂದ ತಹಸೀಲ್ದಾರ, ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ಆದಾಗ್ಯೂ ಸರ್ಕಾರದಿಂದ ಸೂಕ್ತ ಸ್ಪಂದನೆ ಸಿಕ್ಕಿಲ್ಲ. ಈ ಹಿನ್ನಲೆಯಲ್ಲಿ ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ಸಮಾಜ ಅಭಿವೃದ್ಧಿ ಹೋರಾಟ ಸಮಿತಿ ಅಡಿ ಪ್ರತಿ ಜಿಲ್ಲೆಯಲ್ಲಿ ಜಿಲ್ಲಾ ಹೋರಾಟ ಸಮಿತಿ ರಚಿಸಿ ಪ್ರತಿಭಟನೆ, ರಕ್ತಪತ್ರ ಚಳವಳಿಗೆ ಸಿದ್ಧರಾಗಿದ್ದೇವೆ. ಸರ್ಕಾರ ವಿಳಂಬ ನೀತಿ ಅನುರಿಸದೆ ಬೇಡಿಕೆ ಈಡೇರಿಸಬೇಕು. ಇಲ್ಲವಾದಲ್ಲಿ ಹೋರಾಟ ಅನಿವಾರ್ಯ ಎಂದು ಎಚ್ಚರಿಸಿದರು.
ಮಾಜಿ ಶಾಸಕ ಅಶೋಕ ಕಾಟವೆ, ವಿಠ್ಠಲ ಲದವಾ, ನಾಗೇಶ ಕಲಬುರ್ಗಿ, ಗಣಪತಸಾ ಹಬೀಬ, ಸುನೀಲ ವಾಳ್ವೇಕರ, ಗಜಾನನ ಕಾಟವೆ, ಈಶ್ವರ ಜಿತೂರಿ, ಇತರರು ಇದ್ದರು.